ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣದ ಜೊತೆಜೊತೆಗೆ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬದುಕು ಕಟ್ಟಿಕೊಡುವ ಜೀವನದ ಪಾಠವನ್ನು ಕಲಿಸುವ ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಅಭಿಪ್ರಾಯಪಟ್ಟರು.

Advertisement

ಅವರು ಸಭಾಪತಿ ಬಸವರಾಜ ಹೊರಟ್ಟಿ ದಂಪತಿಗಳು ದತ್ತು ಪಡೆದ ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯವರು ಆಯೋಜಿಸಿದ್ದ 2025ನೇ ಸಾಲಿನ ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾಡಿನ ವಿವಿಧ ಕ್ಷೇತ್ರಗಳ ಸಾಧಕರು ಸರ್ಕಾರಿ ಶಾಲೆಗಳಲ್ಲಿಯೇ ಓದಿದ್ದು ಎಂಬುದನ್ನು ಯಾರೂ ಮರೆಯಬಾರದು. ಸರ್ಕಾರಿ ಶಾಲೆಗಳು ಇಂದು ಯಾವುದಕ್ಕೂ ಕಡಿಮೆ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂದಿವೆ. 50ಕ್ಕೂ ಹೆಚ್ಚು ಅಗತ್ಯ ಮೂಲಭೂತ ಸೌಕರ್ಯಗಳನ್ನು ವಿದ್ಯಾರ್ಥಿಗಳಿಗೆ ಕೊಡ ಮಾಡುವದರೊಂದಿಗೆ ಉಚಿತ ಶಿಕ್ಷಣವನ್ನು ಸರ್ಕಾರ ನೀಡುತ್ತಿದೆ. ಇಂಗ್ಲೀಷ್ ಮಾಧ್ಯಮ ಶಾಲೆಗಳ ವ್ಯಾಮೋಹದಲ್ಲಿ ಪಾಲಕರು ದುಬಾರಿ ವೆಚ್ಚ ಮಾಡಿ ವಿದ್ಯಾರ್ಥಿಗಳನ್ನು ಅಲ್ಲಿ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳದೇ ವಂಚಿತರಾಗುತ್ತಿದ್ದಾರೆ. ಮೊದಲು ಇಂಗ್ಲೀಷ್ ಮಾಧ್ಯಮ ವ್ಯಾಮೋಹದಿಂದ ಪಾಲಕರು ಹೊರಬರಲಿ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಶಾಲಾ ದತ್ತು ಉಸ್ತುವಾರಿ ಡಾ. ಬಸವರಾಜ ಧಾರವಾಡ, ಡೈಯಟ್‌ನ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ವಿ. ಶೆಟ್ಟೆಪ್ಪನವರ, ವಿ.ವಿ. ನಡುವಿನಮನಿ, ಉಪನ್ಯಾಸಕ ರವಿ ಪ್ರಕಾಶ, ಶಿಕ್ಷಕರ ಸಂಘಟನೆಯ ಬಿ.ಎಫ್. ಪೂಜಾರ ಮುಂತಾದವರು ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ನಂದಾ ಖಟವಟೆ, ನಗರಸಭಾ ಸದಸ್ಯೆ ವಿದ್ಯಾವತಿ ಗಡಗಿ, ಶಂಕರ ಹಡಗಲಿ, ವಿ.ಎಂ. ಹಿರೇಮಠ, ಮಹೇಶ ಕುಚಬಾಳ, ವಿಜಯ ಕಿರೇಸೂರ, ಬಿ.ಕೆ. ನಿಂಬನಗೌಡ್ರ, ಎಸ್.ಆರ್. ಬಂಡಿ, ಎಫ್.ಸಿ. ಅಬ್ಬಿಗೇರಿ, ಪ್ರಭಾರಿ ಮುಖ್ಯೋಪಾಧ್ಯಾಯೆ ಜಯಲಕ್ಷ್ಮೀ ಅಣ್ಣಿಗೇರಿ ಮುಂತಾದವರಿದ್ದರು. ಎಂ.ಎಚ್. ಕಂಬಳಿ ಸ್ವಾಗತಿಸಿದರು. ಬಿ.ಎಸ್. ಯರಗುಡಿ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಬಣ್ಣದ ಬಲೂನ್‌ಗಳಿಂದ, ಹಸಿರು ತೋರಣಗಳಿಂದ ಶೃಂಗಾರಗೊಂಡ ಶಾಲೆ ಚಿಣ್ಣರ ಸ್ವಾಗತಕ್ಕೆ ಸಜ್ಜಾಗಿತ್ತು. ಮಕ್ಕಳ ಕಲರವ ಶಾಲೆಯ ತುಂಬೆಲ್ಲ ಝೇಂಕರಿಸಿತ್ತು. ಪ್ರಾರಂಭೋತ್ಸವದ ನಂತರ ಎಲ್ಲ ಮಕ್ಕಳಿಗೂ ಸಿಹಿ ಊಟದ ವ್ಯವಸ್ಥೆ ಮಾಡಿದ್ದು ವಿದ್ಯಾರ್ಥಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.


Spread the love

LEAVE A REPLY

Please enter your comment!
Please enter your name here