ಬಿಗ್ ಬಾಸ್ ಗೆಲುವಿನ ಬಳಿಕ ಗಿಲ್ಲಿ ನಟರ ಹೆಸರು ಎಲ್ಲೆಡೆ ಗರ್ಜಿಸುತ್ತಿದೆ. ಆದರೆ ಈ ಗೆಲುವಿನ ಹಿಂದೆ ಕಿಚ್ಚ ಸುದೀಪ್ ಅವರ ಮೌನ ಶ್ರಮ, ಮಾರ್ಗದರ್ಶನ ಮತ್ತು ಕಿವಿಮಾತುಗಳು ಪ್ರಮುಖ ಕಾರಣ ಎಂಬುದು ಇದೀಗ ಬಹಿರಂಗವಾಗಿದೆ.
ಬಿಗ್ ಬಾಸ್ ಮನೆಯೊಳಗೆ ಇರುವಾಗ ಆಟ, ಮಾತು, ವರ್ತನೆ ಎಲ್ಲವೂ ನಿಯಂತ್ರಣ ತಪ್ಪುವುದು ಸಹಜ. ಗಿಲ್ಲಿಯೂ ಹಲವು ಬಾರಿ ತಪ್ಪು ಹೆಜ್ಜೆ ಇಟ್ಟಿದ್ದಾರೆ. ಆದರೆ ಪ್ರತಿಯೊಂದು ಸಂದರ್ಭದಲ್ಲೂ ಸುದೀಪ್ ಅವರನ್ನು ಕರೆದು ತಿದ್ದುವ ಕೆಲಸ ಮಾಡಿದ್ದಾರೆ. ಇದೇ ಕಾರಣಕ್ಕೆ ಗಿಲ್ಲಿ ಹಂತಹಂತವಾಗಿ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.
ಫಿನಾಲೆ ದಿನ ಸುದೀಪ್ ಎದುರು ‘ಸಾಯೋವರೆಗೂ ನಿಮ್ಮನ್ನು ಮರೆಯಲ್ಲ’ ಎಂದು ಗಿಲ್ಲಿ ಹೇಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಬಿಗ್ ಬಾಸ್ ಗೆದ್ದ ನಂತರ ಗಿಲ್ಲಿ ಸುದೀಪ್ ಅವರನ್ನು ಖಾಸಗಿಯಾಗಿ ಭೇಟಿಯಾಗಿ, ಮತ್ತಷ್ಟು ಮಾರ್ಗದರ್ಶನ ಪಡೆದಿದ್ದಾರೆ.
ಈ ವೇಳೆ ಸುದೀಪ್, ‘ಗೆಲುವು ಬಂದಾಗ ಮನುಷ್ಯನ ಮನಸ್ಸು ಕೈ ತಪ್ಪುತ್ತದೆ. ಆ ಸಂದರ್ಭದಲ್ಲಿ ಯೋಚಿಸದೇ ಹೆಜ್ಜೆ ಇಟ್ಟರೆ ಭವಿಷ್ಯ ಹಾಳಾಗಬಹುದು’ ಎಂದು ಗಿಲ್ಲಿಗೆ ಗಂಭೀರ ಸಲಹೆ ನೀಡಿದ್ದಾರೆ. ಈ ಮಾತು ಗಿಲ್ಲಿಯನ್ನು ಇನ್ನಷ್ಟು ಹೊಣೆಗಾರ ವ್ಯಕ್ತಿಯಾಗಿಸಿದೆ ಎನ್ನಲಾಗಿದೆ.
ಇದೇ ವೇಳೆ ಗಿಲ್ಲಿ ಶಿವರಾಜ್ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದು, ಶಿವಣ್ಣ ಮುಂಚಿತವಾಗಿಯೇ ಗಿಲ್ಲಿ ಗೆಲುವಿನ ಬಗ್ಗೆ ಹೇಳಿದ್ದ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಭೇಟಿಯ ವೇಳೆ ಸುದೀಪ್ ಅವರೊಂದಿಗೆ ವಿಡಿಯೋ ಕರೆ ಮೂಲಕ ಮಾತುಕತೆ ನಡೆಸಲಾಗಿದೆ.



