ಮನೆಯಲ್ಲಿ ದಿನ ಬಳಕೆ ಮಾಡುವ, ಕೆಲವೊಂದು ಆಹಾರ ಪದಾರ್ಥಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ನಮಗೆ ತಿಳಿದೇ ಇರುವುದಿಲ್ಲ.
ಆದರೂ ಕೂಡ ಆಗಾಗ, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬಳಸುತ್ತಾ ಇರುತ್ತೇವೆ. ಆದರೆ ನಮಗೆ ಗೊತ್ತೇ ಇರದ ಹಾಗೆ, ಅವುಗಳಿಂದ ಪರೋಕ್ಷವಾಗಿ ನಮಗೆ ಪ್ರಯೋಜನಗಳು ಸಿಗುತ್ತಿರುತ್ತವೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎಂದರೆ ಆಲೂಗಡ್ಡೆ.
ಹೌದು ಸಾಮಾನ್ಯವಾಗಿ ಸಾಂಬರ್ ಮಾಡಲು ಅಡುಗೆ ಮನೆಗೆ ಹೋದಾಗ, ಪಕ್ಕನೆ ನೆನಪಿಗೆ ಬರುವ ತರಕಾರಿ ಎಂದರೆ ಅದು ಆಲೂಗಡ್ಡೆ. ಬೇರೆ ತರಕಾರಿಗಳಿಗೆ ಹೋಲಿಸಿದರೆ, ಸ್ವಲ್ಪ ಕಡಿಮೆ ಬೆಲೆಗೆ ಸಿಗುವ ಈ ತರಕಾರಿಯನ್ನು ಆಗಾಗ ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ, ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ.
ಆಲೂಗಡ್ಡೆಯನ್ನು ಸಾಮಾನ್ಯವಾಗಿ ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಏಕೆಂದರೆ ಇದನ್ನು ನಾವು ಎಲ್ಲಾ ರೀತಿಯ ತರಕಾರಿಗಳಲ್ಲಿಯೂ ಬೇಯಿಸಿ ತಿನ್ನಬಹುದು. ಆಲೂಗೆಡ್ಡೆ ವಿಚಾರಕ್ಕೆ ಬಂದರೆ ಉತ್ತರ ಭಾರತೀಯರು, ದಕ್ಷಿಣ ಭಾರತೀಯರು ಎಂಬ ಭೇದಭಾವವಿಲ್ಲ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟಪಡುವ ಖಾದ್ಯ ಆಲೂಗಡ್ಡೆ ಆಗಿದೆ.
ಆಲೂಗಡ್ಡೆ ತಿನ್ನಲು ರುಚಿಕರವಾಗಿದ್ದು ಪೋಷಕಾಂಶಗಳಿಂದ ಕೂಡಿದೆ. ಇತರ ತರಕಾರಿಗಳಿಗೆ ಹೋಲಿಸಿದರೆ, ಆಲೂಗಡ್ಡೆ ಅಗ್ಗದ ಬೆಲೆಗೆ ಸಿಗುತ್ತದೆ. ಅಲ್ಲದೇ ಇದನ್ನು ವಿವಿಧ ಭಕ್ಷ್ಯಗಳಲ್ಲಿ ಬಳಸಬಹುದು. ಆಲೂಗೆಡ್ಡೆಯನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದರಿಂದ ಅನೇಕ ರೋಗಗಳನ್ನು ತಪ್ಪಿಸಬಹುದು.
ಆಲೂಗಡ್ಡೆ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಇವುಗಳನ್ನು ಸೂಪರ್ ಫುಡ್ ಎನ್ನಲಾಗುತ್ತದೆ. ಆಲೂಗಡ್ಡೆಗಳು ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತವೆ. ಜೊತೆಗೆ, ಫೈಬರ್, ವಿಟಮಿನ್ ಸಿ, ವಿಟಮಿನ್ ಬಿ 6 ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ.
ಆಲೂಗಡ್ಡೆಗಳು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ದೇಹವನ್ನು ರೋಗಗಳಿಂದ ರಕ್ಷಿಸಲು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆ ಮತ್ತು ಹೃದಯದ ಆರೋಗ್ಯವನ್ನೂ ಸುಧಾರಿಸುತ್ತದೆ. ಹಾಗಾದರೆ ಆಲೂಗಡ್ಡೆ ತಿನ್ನುವುದರಿಂದ ಸಿಗುವ 5 ಅದ್ಭುತ ಪ್ರಯೋಜನಗಳೇನು ಎಂಬುವುದನ್ನು ತಿಳಿದುಕೊಳ್ಳೋಣ ಬನ್ನಿ.
ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ಗಳು ಹೇರಳವಾಗಿದ್ದು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ದೈಹಿಕ ಚಟುವಟಿಕೆಗಳಿಗೆ ಶಕ್ತಿಯ ಅಗತ್ಯವಿರುವವರಿಗೆ, ಆಲೂಗಡ್ಡೆ ತುಂಬಾ ಉಪಯುಕ್ತವಾಗಿದೆ. ಆಲೂಗಡ್ಡೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳಿದ್ದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಆಲೂಗೆಡ್ಡೆಗಳು ಫೈಬರ್ನಲ್ಲಿ ಸಮೃದ್ಧವಾಗಿವೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಆಲೂಗಡ್ಡೆ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಮತ್ತು ಕರುಳಿನ ಆರೋಗ್ಯ ಸುಧಾರಿಸುತ್ತದೆ. ಇದಲ್ಲದೇ, ಆಲೂಗಡ್ಡೆ ಮೊಣಕಾಲು ನೋವನ್ನು ನಿವಾರಿಸುತ್ತದೆ.
ಆಲೂಗಡ್ಡೆ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಆಲೂಗಡ್ಡೆ ಕೂಡ ತೂಕ ಇಳಿಸಲು ಸಹಾಯ ಮಾಡುತ್ತದೆ. ಆಲೂಗಡ್ಡೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆಲೂಗಡ್ಡೆಯಲ್ಲಿ ಕ್ಯಾಲ್ಸಿಯಂ ಮತ್ತು ರಂಜಕವಿದೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಆಲೂಗಡ್ಡೆಯಲ್ಲಿ ವಿಟಮಿನ್ ಬಿ6 ಇದ್ದು, ಇದು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯ. ಆಲೂಗಡ್ಡೆ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಈ ರೋಗಿಗಳು ಆಲೂಗೆಡ್ಡೆಯನ್ನು ಎಚ್ಚರಿಕೆಯಿಂದ ತಿನ್ನಬೇಕು:
ಆರೋಗ್ಯ ತಜ್ಞರ ಪ್ರಕಾರ, ಆಲೂಗಡ್ಡೆ ತುಂಬಾ ಪೌಷ್ಟಿಕ ಮತ್ತು ಆರೋಗ್ಯಕರ ತರಕಾರಿಯಾಗಿದೆ, ಆದರೆ ಕೆಲವರು ಇದನ್ನು ಎಚ್ಚರಿಕೆಯಿಂದ ತಿನ್ನಬೇಕು. ಆಲೂಗಡ್ಡೆಯಲ್ಲಿ ಕಾರ್ಬೋಹೈಡ್ರೇಟ್ಗಳು ಅಧಿಕವಾಗಿರುತ್ತವೆ ಮತ್ತು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಹಾಗಾಗಿ ಮಧುಮೇಹ ಇರುವವರು ಆಲೂಗಡ್ಡೆಯನ್ನು ಕಡಿಮೆ ಸೇವಿಸಬೇಕು.
ಕಿಡ್ನಿ ಸ್ಟೋನ್ ಇರುವ ರೋಗಿಗಳು ಕಡಿಮೆ ಆಲೂಗಡ್ಡೆ ತಿನ್ನಬೇಕು. ಚಿಪ್ಸ್ ಅಥವಾ ಫ್ರೆಂಚ್ ಫ್ರೈಗಳಂತಹ ಕರಿದ ಆಲೂಗಡ್ಡೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಏಕೆಂದರೆ ಅವುಗಳು ಟ್ರಾನ್ಸ್ ಕೊಬ್ಬು ಮತ್ತು ಹೆಚ್ಚುವರಿ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಆದ್ದರಿಂದ, ಆಲೂಗಡ್ಡೆಯನ್ನು ಕಡಿಮೆ ತಿನ್ನಬೇಕು.