ಆಹಾರವು ಪ್ರತಿಯೊಂದು ಜೀವಿಗಳ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಉತ್ತಮ ಆಹಾರವು ಮನುಷ್ಯನ ಮುಖದ ಮೇಲೆ ನಗುವನ್ನು ಪ್ರಕಾಶಿಸುವಂತೆ ಮಾಡುತ್ತದೆ. ಆಹಾರ, ಜನನ, ನಿದ್ರೆ, ಪ್ರೀತಿ ಮತ್ತು ಸಾವು ಮಾನವನ ಜೀವನದಲ್ಲಿರುವ ಐದು ಮುಖ್ಯ ಸಂಗತಿಗಳಾಗಿವೆ. ಆಹಾರ ಮನುಷ್ಯನ ಜೀವನಕ್ಕೆ ಅತ್ಯಮೂಲ್ಯವಾಗಿದ್ದರೂ, ಇಂದಿಗೂ ಲಕ್ಷಾಂತರ ಜನರು ಹಸಿವಿನಿಂದ ಅಥವಾ ಅರೆಹೊಟ್ಟೆಯಿಂದ ನರಳುತ್ತಿದ್ದಾರೆ. ಇದಕ್ಕೆ ಕಾರಣ ಉಳಿದವರು ಮಾಡುತ್ತಿರುವ ಆಹಾರದ ಪೋಲು ಎಂದರೆ ತಪ್ಪಾಗಲ್ಲ.
ಇದಕ್ಕೆ ಸಾಕ್ಷಿ, ಪ್ರತಿವರ್ಷ ಸಾವಿರಾರು ಟನ್‌ಗಟ್ಟಲೇ ಉತ್ಪಾದನೆಯಾಗುತ್ತಿರುವ ಆಹಾರ ತ್ಯಾಜ್ಯ. ನಾವು ಪ್ರತಿನಿತ್ಯ ಹಾಳುಮಾಡುವ ಆಹಾರ, ಇನ್ನಾರೋ ವ್ಯಕ್ತಿಯ ಹೊಟ್ಟೆ ತುಂಬಿಸಬಹುದು ಎಂಬುದನ್ನು ಎಂದಿಗೂ ಮರೆಯಬಾರದು. ಇದನ್ನು ಕಡಿಮೆಮಾಡಲು, ಆಹಾರದ ಮಹತ್ವದ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ವಿಶ್ವದಾದ್ಯಂತ ‘ವಿಶ್ವ ಆಹಾರ ದಿನ’ವನ್ನು ಆಚರಿಸಲಾಗುತ್ತಿದೆ.
ಕೃಷಿ ಅಭಿವೃದ್ಧಿಯ ಮೂಲಕ ಜಗತ್ತಿನಾದ್ಯಂತ ಹಸಿವು ಮುಕ್ತ ಸಮಾಜ ನಿರ್ಮಾಣದೊಂದಿಗೆ ಬಡತನ ನಿರ್ಮೂಲನೆ ಮಾಡುವುದು ಹಾಗೂ ಹಸಿವು ಮತ್ತು ಬಡತನದಿಂದ ನರಳುತ್ತಿರುವ ಜನರಿಗೆ ಸೂಕ್ತ ಆಹಾರ ನೀಡಬೇಕು. ನಮ್ಮಲ್ಲಿ ಯಾರೂ ಹಸಿವಿನಿಂದ ಸಾಯಬಾರದು ಎಂಬುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ 1979ರಲ್ಲಿ ಮೊದಲ ಬಾರಿಗೆ ವಿಶ್ವ ಆಹಾರ ದಿನವೆಂದು ಗುರುತಿಸಿತು. ಈ ದಿನವು ಅಕ್ಟೋಬರ್ 16, 1945ರಂದು ಸಂಭವಿಸಿದ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಅಡಿಪಾಯವನ್ನು ಸೂಚಿಸುತ್ತದೆ. ಅಂದಿನಿಂದ ಪ್ರತಿವರ್ಷ ಅಕ್ಟೋಬರ್ 16ನ್ನು ವಿಶ್ವ ಆಹಾರ ದಿನವಾಗಿ ಆಚರಿಸಲಾಗುತ್ತಿದೆ. ಆಹಾರವು ವಿವಿಧ ಹಂತಗಳಲ್ಲಿ ಜನರನ್ನು ಒಟ್ಟುಗೂಡಿಸುತ್ತದೆ. ಇದು ಆತ್ಮ ಮತ್ತು ದೇಹದ ಪೋಷಣೆಯನ್ನು ಕಾಪಾಡುತ್ತದೆ ಎಂದು ಹಿರಿಯರ ಅನುಭವದ ಮಾತು.
ಆಹಾರ ಸೇವಿಸುವುದು ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದು. ಸಮೀಕ್ಷೆಯೊಂದರ ಪ್ರಕಾರ ಜಗತ್ತಿನಲ್ಲಿ ಪ್ರತಿ ವರ್ಷ 5 ದಶಲಕ್ಷ ಮಕ್ಕಳು ಹಸಿವಿನಿಂದ ಸಾವಿಗೀಡಾಗುತ್ತಿದ್ದಾರೆ. ಈ ಪೈಕಿ 5 ವರ್ಷದ ಒಳಗಿನ ಮಕ್ಕಳೇ ಹೆಚ್ಚು. ಏಕೆಂದರೆ ಮಕ್ಕಳಿಗೆ ಪೌಷ್ಟಿಕ ಆಹಾರದ ಕೊರತೆಯಿಂದ ಅವರು ಸತ್ವವಿಲ್ಲದ, ಹಳಸಿದ ಆಹಾರದಿಂದ ಈ ಸಾವಿಗೀಡಾಗುತ್ತಿದ್ದಾರೆ. ಬಡ ರಾಷ್ಟ್ರಗಳಲ್ಲಿ ಶೇ. 50ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ವಿಶ್ವ ಆಹಾರ ದಿನದಡಿಯಲ್ಲಿ 40 ದೇಶಗಳಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆಯನ್ನು ಕಡಿಮೆ ಮಾಡಲು ಪಣ ತೊಡಲಾಗಿದೆ.
ಆದಾಗ್ಯೂ ಪ್ರಪಂಚದ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಚಾದ್, ಯೆಮೆನ್, ಮಡಗಾಸ್ಕರ್, ಸಿರಿಯಾ, ಜಾಂಬಿಯಾ, ಸಿಯೆರಾ ಲಿಯೋನ್, ಹೈಟಿ, ಸೂಡಾನ್, ಅಫ್ಘಾನಿಸ್ಥಾನ ಇವು ಆಹಾರ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ದೇಶಗಳಾಗಿವೆ. ಪೌಷ್ಠಿಕಾಂಶದ ಆಹಾರವು ಕೆಲವೊಮ್ಮೆ ದುಬಾರಿಯಾಗಿದೆ ಮತ್ತು ಅನೇಕ ಜನರಿಗೆ ಕೈಗೆಟುಕುವಂತಿಲ್ಲ ಎಂಬ ಅಂಶವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ. ಹೃದಯ ರಕ್ತನಾಳದ ಕಾಯಿಲೆಗಳು, ಮಧುಮೇಹ ಮತ್ತು ಕ್ಯಾನ್ಸರ್‌ಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಹಲವಾರು ಸಾವುಗಳಿಗೆ ಅನಾರೋಗ್ಯಕರ ಆಹಾರವು ಮುಖ್ಯ ಅಪಾಯಕಾರಿ ಅಂಶವಾಗಿದೆ ಎಂದು ನಿಮಗೆ ತಿಳಿದಿದೆಯೇ?
ಆಹಾರ ತ್ಯಾಜ್ಯ ಕಡಿಮೆ ಮಾಡುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆ ಹೇಳುತ್ತದೆ. ಇದು ಒಬ್ಬರಿಂದ ಸಾಧ್ಯವಾಗುವುದಲ್ಲ. ಅದಕ್ಕಾಗಿ ಪ್ರತಿಯೊಬ್ಬರೂ ಆರೋಗ್ಯಕರ ಆಹಾರವನ್ನು ಆರಿಸಿ, ಈ ಮೂಲಕ ಆರೋಗ್ಯಕರ ದೇಹ ಮತ್ತು ಪರಿಸರವನ್ನು ಕಾಪಾಡಿಕೊಳ್ಳಬೇಕು. ನಿಮಗೆ ಆರೋಗ್ಯಕರ ಹಾಗೂ ಪರಿಸರಕ್ಕೆ ಸಮರ್ಥವಾಗಿರುವ ಉತ್ಪನ್ನಗಳನ್ನು ಆಯ್ಕೆ ಮಾಡಬೇಕು. ಆಹಾರ ಸಂಗ್ರಹಣೆಯನ್ನು ಸುಧಾರಣೆ ಮಾಡುವುದರ ಮೂಲಕ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು.
ಸಾಧ್ಯವಾದಷ್ಟು ಮರುಬಳಕೆ ಮಾಡಿ. ಉಳಿದ ಆಹಾರದಿಂದ ಗೊಬ್ಬರ ತಯಾರಿಸಲು ಪ್ರಯತ್ನಿಸಿ. ಸ್ಥಳೀಯ ಪರಿಸರ ವ್ಯವಸ್ಥೆಗಳನ್ನು ಪೋಷಿಸಲು ಸಣ್ಣ ರೈತರು ಮತ್ತು ಸ್ಥಳೀಯ ಉತ್ಪಾದಕರನ್ನು ಬೆಂಬಲಿಸಿ.
2025ರ ವಿಶ್ವ ಆಹಾರ ದಿನದ ಥೀಮ್ ‘ಉತ್ತಮ ಆಹಾರದ ಭವಿಷ್ಯಕ್ಕಾಗಿ ಕೈಜೋಡಿಸಿ’ ಎಂದು ಜಿನೀವಾ ಪರಿಸರ ಜಾಲ ಹೇಳುತ್ತದೆ. ಹೆಚ್ಚು ಶಾಂತಿಯುತ, ಸುಸ್ಥಿರ ಮತ್ತು ಆಹಾರ-ಸುರಕ್ಷಿತ ಜಗತ್ತನ್ನು ಸೃಷ್ಟಿಸಲು ಈ ಥೀಮ್ ತಲೆಮಾರುಗಳಾದ್ಯಂತ ಜಾಗತಿಕ ಸಹಯೋಗ ಮತ್ತು ಪಾಲುದಾರಿಕೆಯನ್ನು ಒತ್ತಿ ಹೇಳುತ್ತದೆ. ಇದು ಆಹಾರ ಮತ್ತು ಕೃಷಿ ಸಂಸ್ಥೆಯ 80ನೇ ವಾರ್ಷಿಕೋತ್ಸವದ ಗೌರವವಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಜಿನೀವಾ ಪರಿಸರ ಜಾಲದ ಒತ್ತಾಸೆಯಾಗಿದೆ.
ಒಟ್ಟಾರೆಯಾಗಿ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುವ ರೈತರು, ಕಾರ್ಮಿಕರು, ಮಹಿಳೆಯರು, ವಲಸಿಗರು ಮತ್ತು ನಗರಗಳಲ್ಲಿ ದುಡಿಯುವ ಅತ್ಯಂತ ದುರ್ಬಲ ವರ್ಗದ ಜನರಿಗೆ ಅನುಕೂಲವಾಗುವ ಸಾರ್ವಜನಿಕ ನೀತಿಗಳನ್ನು ಉತ್ತೇಜಿಸಿ, ಪ್ರತಿ ಮಗುವಿನಿಂದ ವೃದ್ಧರವರೆಗೆ ಆಹಾರ ಸಿಗುವಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮ ಸರ್ಕಾರಗಳ ಕರ್ತವ್ಯವಾಗಬೇಕು ಹಾಗೂ ನಾವು ಸಹ ತಿನ್ನುವ ಆಹಾರವನ್ನು ಪೋಲು ಮಾಡದಂತೆ ಸರಿಯಾಗಿ ಬಳಸಿಕೊಳ್ಳಬೇಕು. ಹಾಗೆಯೇ ಒಂದು ಅನ್ನದ ಅಗಳಿನ ಬೆಲೆಯನ್ನು ತಿಳಿಯಬೇಕಾದರೆ ಸಿದ್ಧಗಂಗಾ ಮಠದ ಅನ್ನ ದಾಸೋಹ ಕೇಂದ್ರವನ್ನು ನೋಡಿ ಕಲಿಯಬೇಕು ಆಗಲೇ ಆಹಾರದ ಬೆಲೆ ಗೊತ್ತಾಗುತ್ತದೆ.
– ಬಸವರಾಜ ಎಮ್. ಯಾರಗುಪ್ಪಿ
ಶಿಕ್ಷಕರು, ಹವ್ಯಾಸಿ ಬರಹಗಾರರು
ಲಕ್ಷ್ಮೇಶ್ವರ