ಕಳೆದು ಹೋದುದರ ಬಗ್ಗೆ ಚಿಂತಿಸದಿರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚನ್ನವೀರಶರಣರ ಮಠದಲ್ಲಿ ಶರಣರ 30ನೇ ಜಾತ್ರಾ ಮಹೋತ್ಸವ ಪುಣ್ಯಸ್ಮರಣೋತ್ಸವದ ಅಂಗವಾಗಿ ಧರ್ಮಚಿಂತನಗೋಷ್ಠಿ ಜರುಗಿತು.

Advertisement

ಸನ್ನಿಧಾನ ವಹಿಸಿದ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಮುರಿದ ಮೂಳೆಗಳನ್ನು ಕೂಡಿಸುವವರು ಬಹಳ ಜನರಿದ್ದಾರೆ. ಆದರೆ, ಮುರಿದ ಮನಸ್ಸುಗಳನ್ನು ಕಟ್ಟುವ ಕಾರ್ಯವನ್ನು ಧರ್ಮಚಿಂತನ ಗೋಷ್ಠಿ ಮಾಡುವುದು. ದಾರ್ಶನಿಕರು, ಋಷಿಗಳು ಸಂಶೋಧನೆಯಲ್ಲಿ ಜಾಣನಾರು, ದಡ್ಡನಾರು, ಎಂಬ ಚಿಂತನೆ ಮಾಡುತ್ತ ಬಂದಿದ್ದಾರೆ. ಜಾಣ ಮತ್ತು ದಡ್ಡನಾಗುವುದು ಹೊರಗಿನಿಂದ ಬರುವುದಲ್ಲ, ಯಾರು ತಮ್ಮ ಜೀವನದಲ್ಲಿ ಹಿಂದೆ ನಡೆದ ಕಹಿ ಘಟನೆಗಳನ್ನು ಮರೆತು ಮುಂದೆ ಆಗುವುದರ ಬಗ್ಗೆ ಭಯ ಪಡುವುದಿಲ್ಲವೋ ಅವರು ಜಾಣರು, ಮುತ್ಸದ್ದಿಗಳು ಎನ್ನಬಹುದು ಎಂದರು.

ದೇಹ ಮಾತ್ರ ವರ್ತಮಾನದಲ್ಲಿರುತ್ತದೆ. ಮನಸ್ಸು ಭೂತ, ಮತ್ತು ಭವಿಷ್ಯತ್ತಿನಲ್ಲಿ ವಿನಾಕಾರಣ ಚಿಂತಿಸುತ್ತ ಬದುಕುತ್ತದೆ. ಮನಸ್ಸಿನಲ್ಲಿ ವಿಷ ತುಂಬಿಕೊಂಡು ಜೀವನದಲ್ಲಿ ಘಟಿಸಿದ ಕಹಿ ಘಟನೆಯನ್ನು ತಲೆಯಲ್ಲಿಟ್ಟುಕೊಳ್ಳಬಾರದು. ಒಮ್ಮೆ ನಿಂದನೆ, ಅಪಮಾನ, ಸಾವು, ನೋವು, ಬರುವುದು ಸಹಜ. ಕಳೆದು ಹೋದುದರ ಬಗ್ಗೆ ಚಿಂತಿಸಬಾರದು. ಸತ್ತ ನಿನ್ನೆಗಾಗಿ, ಬರಲಿರುವ ನಾಳೆಗಾಗಿ ಭಯಪಡುವುದಕ್ಕಿಂತ ಇಂದಿನ ಸುಂದರ ಕ್ಷಣವನ್ನು ಅನುಭವಿಸುವುದೇ ಜೀವನದ ಯಶಸ್ಸಿನ ಕೌಶಲ್ಯವಾಗಿದೆ.

ಕಾಯಕ ಮಾಡುವುದನ್ನು ರೂಢಿಸಿಕೊಂಡು ಪುಣ್ಯಕಾರ್ಯಗಳನ್ನು ಮಾಡಿದಾಗ ಪುನಃ ಫಲಶೃತಿ ಪುಣ್ಯದ ಬುತ್ತಿಯಾಗಿಯೇ ಮರಳಿ ನಿಸರ್ಗ ನೀಡುವುದು. ಮನುಷ್ಯ ನೆಲದ ಕಾನೂನಿಂದ ತಪ್ಪಿಸಿಕೊಳ್ಳಬಹುದು. ಆದರೆ ನಿಸರ್ಗದ ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಸರ್ಗ ಪ್ರಾಣಿ ಮತ್ತು ಮನುಷ್ಯನಲ್ಲಿ ಕಣ್ಣು, ಮೂಗು, ಕಿವಿ, ಇಲ್ಲದವರನ್ನು ಸೃಷ್ಟಿಸಿದೆ. ಆದರೆ ಹೊಟ್ಟೆ ಇಲ್ಲದವರನ್ನು ಸೃಷ್ಟಿಸಿಲ್ಲ. ಎಲ್ಲರಿಗೂ ಹೊಟ್ಟೆ ಇದೆ. ಅಂದರೆ ಎಲ್ಲರೂ ದುಡಿದೇ ಉಣ್ಣಬೇಕು ಎಂಬುದು ಸೃಷ್ಟಿಯ ನಿಯಮವಾಗಿದೆ. ಕಾರಣ, ಪುಣ್ಯಕರ್ಮಗಳನ್ನು ಮಾಡಿ ಪುಣ್ಯದ ಫಲ ಹೆಚ್ಚಿಸಿಕೊಳ್ಳಬೇಕೆಂದರು.

ತಿಕೋಟಾ ವಿರಕ್ತಮಠದ ಮ.ನಿ.ಪ್ರ. ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ಉಪದೇಶಾಮೃತ ನೀಡಿ, ಮನುಷ್ಯ ಜ್ಞಾನ ಮತ್ತು ಅನ್ನಕ್ಕಾಗಿ ಬದುಕುತ್ತಿದ್ದಾನೆ. ಜ್ಞಾನವನ್ನು ಸಂಪಾದಿಸಿ ಧರ್ಮ ಮಾರ್ಗದಲ್ಲಿ ನಡೆದಾಗ ಉತ್ತಮ ನಡತೆಯುಳ್ಳವನಾಗುತ್ತಾನೆ. ಅತಿಯಾದ ದುರಾಸೆಯನ್ನು ಹೊಂದಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

ಸಮ್ಮುಖ ವಹಿಸಿದ ಹೊಸಳ್ಳಿಯ ಬೂದೀಶ್ವರ ಮಠದ ಮ.ನಿ.ಪ್ರ. ಬೂದೀಶ್ವರ ಮಹಾಸ್ವಾಮಿಗಳು ಮಾತನಾಡಿ ಹುಟ್ಟು ಸಾವುಗಳ ಮಧ್ಯೆ ಬದುಕೆಂಬುದು ಅನಿಶ್ಚಿತವಾಗಿದೆ. ಆದರೆ ಜ್ಞಾನವನ್ನು ಪಡೆದು ಬರಲಿರುವ ಬದುಕನ್ನು ಕರಗತ ಮಾಡಿಕೊಂಡವನು ಜ್ಞಾನಿಯಾಗುತ್ತಾನೆ. ಬದುಕಿನಲ್ಲಿ ಯಶಸ್ಸು ಹೊಂದುತ್ತಾನೆ ಎಂದು ತಿಳಿಸಿ ಅಂತಹ ಚಿಂತನೆ ಮಾಡುವುದು ಉತ್ತಮ ಬೆಳವಣಿಗೆ ಎಂದರು.

ಖಜ್ಜಿಡೋಣಿಯ ಶ್ರೀ ಕೃಷ್ಣಾನಂದ ಶಾಸ್ತ್ರಿಗಳು ಉಪದೇಶಾಮೃತ ನೀಡಿದರು. ಹೆಬ್ಬಾಳ ಬೃಹನ್ಮಠದ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಮಹಾರಾಷ್ಟ್ರದ ಅಣದೂರಿನ ನೀಲಕಂಠೇಶ್ವರ ಮಠದ ಷ.ಬ್ರ.ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಸುಕ್ಷೇತ್ರ ಗುಡದೂರಿನ ನೀಲಕಂಠತಾತನವರು, ಮಂಗಳೂರಿನ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಕೆ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳ, ಯುವ ಧುರೀಣ ಉಮೇಶಗೌಡ ಪಾಟೀಲ ಉಪಸ್ಥಿತರಿದ್ದರು.

ಗದುಗಿನ ದಿಯಾ ಪೀರಸಾಬ ಕೌತಾಳ ಹಾಗೂ ತಂಡದವರಿಂದದ ಸಂಗೀತ ಸೇವೆ ಜರುಗಿತು. ಶಿವಲಿಂಗಶಾಸ್ತ್ರಿ ಸಿದ್ಧಾಪೂರ ಸ್ವಾಗತಿಸಿದರು. ಬೆಂಗಳೂರು ಆಕಾಶವಾಣಿ ನಿರೂಪಕಿ ಸವಿತಾ ಶಿವಕುಮಾರ ನಿರೂಪಿಸಿದರು. ಶಿವಶರಣೆಗೌಡ ಯರಡೋಣಿ ವಂದಿಸಿದರು.

ಶ್ರೀ ಶಿವಶಾಂತವೀರಶರಣರು ಮಾತನಾಡಿ, ಜಾತ್ರೆಯ ಉದ್ದೇಶ ಮನುಕುಲಕ್ಕೆ ಆಧ್ಯಾತ್ಮವನ್ನು, ಜ್ಞಾನದ ಅನುಭವದ ಮಾತುಗಳನ್ನು, ಶರಣರು ನಡೆದು ಹೋದ

ದಾರಿಯನ್ನು ಭಕ್ತ ಸಂಕುಲಕ್ಕೆ ತಿಳಿಸುವುದು, ನಮ್ಮ ಭವ್ಯ ಪರಂಪರೆ, ಸಂಸ್ಕೃತಿ, ಪರಿಚಯಿಸುವುದು ಉಳಿಸಿ ಬೆಳೆಸುವುದು ಆಗಿದೆ. ಗುರು ನೀಡುವ ಪ್ರೇಮ ಪರಮ ಪ್ರೇಮ. ಅದು ನಮಗೆ ಸುಖ ನೀಡುತ್ತದೆ ಮತ್ತು ಶಾಶ್ವತವಾಗಿರುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here