ಚಿಕ್ಕಮಗಳೂರು:- ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರಿಗೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಹಾಗೂ ಅವಮಾನಕಾರಿ ಮೆಸೇಜ್‌ಗಳ ಕಾಟ ಹೆಚ್ಚಾಗಿದೆ.
ಇದರಿಂದ ಬೇಜಾರಾಗಿರುವ ಅವರು, ಈಗಾಗಲೇ ಓರ್ವನ ವಿರುದ್ಧ ದೂರು ನೀಡಿ ಜೈಲಿಗೆ ಕಳುಹಿಸಿದ್ದರೂ, ಇನ್ನು ಮುಂದೆ ಇಂತಹ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು “ಎಂಎಲ್‌ಎ ಪದವಿ ಪಾರ್ಟ್‌ಟೈಂ, ಸೋಶಿಯಲ್ ಮೀಡಿಯಾ ಫುಲ್‌ಟೈಂ”, “ರಸ್ತೆಗೆ ಜಲ್ಲಿ ಹಾಕಿ ಹಾಗೇ ಬಿಟ್ಟಿದ್ದೀರಲ್ಲ”, “ಇವರೇನು ಶಾಸಕರೋ ಅಥವಾ ಸೋಶಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರೋ” ಎನ್ನುವ ರೀತಿಯ ಅವಮಾನಕಾರಿ ಹಾಗೂ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕಿ, “ಶಾಸಕರಾದ ಕೂಡಲೇ ನಮಗೆ ವೈಯಕ್ತಿಕ ಜೀವನ ಇರಲ್ವಾ? ಗಂಡ–ಮಕ್ಕಳು, ಸಂಸಾರ, ಸ್ನೇಹಿತರು ಇರಲ್ವಾ? ನಾವು ಕೆಲಸ ಮಾಡುತ್ತಿಲ್ಲವಾ?” ಎಂದು ಪ್ರಶ್ನಿಸಿದ್ದಾರೆ.
ಶಾಸಕಿ ನಯನಾ ಮೋಟಮ್ಮ ಅವರು ಪರ್ಸನಲ್ ಹಾಗೂ ರಾಜಕೀಯ ಉದ್ದೇಶಕ್ಕಾಗಿ ಎರಡು ಇನ್‌ಸ್ಟಾಗ್ರಾಂ ಖಾತೆಗಳನ್ನು ಹೊಂದಿದ್ದು, ಪರ್ಸನಲ್ ಖಾತೆಗೆ ಕೆಟ್ಟ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. “ವ್ಯಾಯಾಮ ಮಾಡಿದ್ರೆ ತಪ್ಪಾ? ಬರ್ತ್‌ಡೇ ಆಚರಿಸಿದ್ರೆ ತಪ್ಪಾ? ವಿಶೇಷವಾಗಿ ನಾನು ಮಹಿಳೆಯರ ಪರ ಧ್ವನಿ ಎತ್ತಿದ್ದಕ್ಕೆ ಈ ಟೀಕೆಗಳು ಬರುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಶ್ಲೀಲ ಕಾಮೆಂಟ್‌ಗಳ ವಿರುದ್ಧ ಕಾರ್ಯಕರ್ತರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಮೂಡಿಗೆರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. “ನಾನು ಧೈರ್ಯವಾಗಿ ಜೀವನ ಮಾಡ್ತೇನೆ. ನನಗೆ ಯಾರ ಭಯವೂ ಇಲ್ಲ. ಇಂತಹ ವಿಷಯಗಳಿಗೆ ಮತ್ತೆ ದೂರು ಕೊಡೋದಿಲ್ಲ. ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತೇನೆ” ಎಂದು ಶಾಸಕಿ ಗುಡುಗಿದ್ದಾರೆ.
ರಾಜಕೀಯ ಪ್ರವೇಶಕ್ಕೂ ಮುನ್ನ ನಾನು ಹೇಗಿದ್ದೆನೋ, ಈಗಲೂ ಅದೇ ರೀತಿ ಇರಲು ಪ್ರಯತ್ನಿಸುತ್ತೇನೆ. ರಾಜಕೀಯದಲ್ಲಿಯೂ ಯಾವುದೇ ಮುಚ್ಚುಮರೆ ಇರಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.



