ಬೆಂಗಳೂರು: ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಇವತ್ತು ಯುವಜನತೆಯ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು.
ಯುವಜನತೆ ಕಳೆದ ಎರಡೂವರೆ ವರ್ಷದಿಂದ ಕಣ್ಣೀರು ಹಾಕುತ್ತಿದ್ದಾರೆ. ಪ್ರತಿಭಟನೆ- ಹೋರಾಟ ಮಾಡುತ್ತಿದ್ದಾರೆ; ಇದ್ಯಾವುದನ್ನೂ ಲೆಕ್ಕಿಸದೇ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲೂ ಇದೇ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ ಮಾಡಿದರೆ ಲಾಠಿ ಚಾರ್ಜ್ ಮಾಡಿದ್ದರು.
ಆಗಲೂ ಸರಕಾರ ಎಚ್ಚತ್ತುಕೊಳ್ಳಲಿಲ್ಲ ಎಂದು ದೂರಿದರು. ಮುಖ್ಯಮಂತ್ರಿಗಳ ಜೊತೆ ಭೇಟಿಗೆ ಸಮಯ ನಿಗದಿಪಡಿಸಲು ರಾಜ್ಯ ಹೈಕೋರ್ಟ್ ಮಧ್ಯಸ್ಥಿಕೆ ವಹಿಸಬೇಕಾಯಿತು ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರು ಕುರ್ಚಿ ಕಾಳಗದಲ್ಲಿ ಬ್ಯುಸಿ ಆಗಿದ್ದಾರೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಕುರ್ಚಿ ಕಸಿದುಕೊಳ್ಳಲು ಮುಂದಾಗಿದ್ದಾರೆಯೇ ವಿನಾ ಈ ಯುವಜನತೆಯ ಸಮಸ್ಯೆ ಆಲಿಸಲು ಇವರಿಗೆ ಸಮಯ ಸಿಗುತ್ತಿಲ್ಲ ಎಂದು ಟೀಕಿಸಿದರು.
ನನ್ನನ್ನು ವಿದ್ಯಾರ್ಥಿಗಳ ಒಕ್ಕೂಟದವರು ಬಂದು ಭೇಟಿ ಮಾಡಿದ್ದರು. 2 ಲಕ್ಷ 85 ಸಾವಿರ ಹುದ್ದೆಗಳು ಇವತ್ತಿಗೂ ಖಾಲಿ ಬಿದ್ದಿವೆ. ಕಾಂಗ್ರೆಸ್ ಸರಕಾರಕ್ಕೆ ಅವುಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.



