ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರ ಕುಂದುಕೊರೆತಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡುವುದರ ಜೊತೆಗೆ, ಜನಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನರೇಗಲ್ಲ ಪೊಲೀಸರು ಕೈಗೊಂಡಿದ್ದಾರೆ. `
ಪಿಎಸ್‌ಐ ಐಶ್ವರ್ಯ ನಾಗರಾಳ ಅವರ ಸೂಚನೆಯ ಮೇರೆಗೆ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಈ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. `ಮನೆ ಮನೆಗೆ ಪೊಲೀಸ್’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಗುಜಮಾಗಡಿ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಕಿರಣಕುಮಾರ ಹಿರೇಮಠ ಬೀಟ್ ಸಂಚಾರ ನಡೆಸಿ ಜನಜಾಗೃತಿ ಕೈಗೊಂಡರು.
ಈ ವೇಳೆ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರನ್ನು ಅವರವರ ಮನೆಯಲ್ಲಿಯೇ ಭೇಟಿಯಾಗಿ ಅವರಿಂದ ಮಾಹಿತಿ ಸಂಗ್ರಹಿಸಿ, ಅಹವಾಲುಗಳನ್ನು ಸ್ವೀಕರಿಸಿದರು. ಹೆಚ್ಚಿನ ಭದ್ರತೆಗಾಗಿ ಸಾಧ್ಯವಾದವರು ನೀವು ವಾಸಿಸುವ ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳಿ. ಮನೆಗಳ್ಳತನ, ಸರಗಳ್ಳತನದಂತಹ ಅವಘಡಗಳೇನಾದರೂ ನಡೆದರೆ ತಕ್ಷಣ ತುರ್ತು ಸಹಾಯವಾಣಿ ಸಂಖ್ಯೆ 112, ಸೈಬರ್ ಅಪರಾಧಗಳ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ ತಮ್ಮ ದೂರನ್ನು ದಾಖಲಿಸುವುದರ ಮೂಲಕ ಪರಿಹಾರ ಪಡೆಯಬಹುದೆಂದು ತಿಳಿಸಿದರು.