ಚಿಕ್ಕಬಳ್ಳಾಪುರ: ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಕಿರುಕುಳ ನೀಡುತ್ತಿದ್ದ ಗಂಡ ಮತ್ತು ಸಂಬಂಧಿಕರಿಂದ ಬೇಸತ್ತ ಯುವ ಉಪನ್ಯಾಸಕಿ ಸಾಯುವ ಮೊದಲು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂ ಹತ್ತಿರ ನಡೆದಿದೆ. ಮೃತಳನ್ನು ಪುಷ್ಪ (23) ಎಂದು ಗುರುತಿಸಲಾಗಿದೆ. ಒಂದೂವರೆ ವರ್ಷದ ಹಿಂದೆ ತಪಸೀಹಳ್ಳಿ ಗ್ರಾಮದ ವೇಣು ಎಂಬುವವರ ಜೊತೆ ವಿವಾಹವಾಗಿದ್ದಳು. ಮದುವೆಯ ಬಳಿಕ ಗಂಡ, ಅತ್ತೆ, ಮಾವರು ವರದಕ್ಷಿಣೆ ಬೇಡಿಕೆ ಇಟ್ಟು ಹಿಂಸೆ ನೀಡುತ್ತಿದ್ದರು.
ಪುಷ್ಪಳ ಹೇಳಿಕೆ ಪ್ರಕಾರ, ಗಂಡನ ಸಂಬಂಧಿಯಾದ ಮೈದುನನ ಜೊತೆ ಮಲಗಲು ಬಲವಂತ ಮಾಡಲಾಗುತ್ತಿತ್ತು. ಊಟದಲ್ಲಿ ವಿಷ ಹಾಕಿ ಕೊಲ್ಲುವ ಯತ್ನವೂ ನಡೆದಿದೆ ಎಂದು ಆಕೆ 8 ನಿಮಿಷದ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.
ಮೂರು ದಿನಗಳಿಂದ ಕಾಣೆಯಾಗಿದ್ದ ಪುಷ್ಪಳ ಶವವು ಅಕ್ಟೋಬರ್ 20ರಂದು ಡ್ಯಾಂನಲ್ಲಿ ಪತ್ತೆಯಾಗಿದೆ. ಗಂಡ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ ಹಾಗೂ ಮೈದುನ ನಾರಾಯಣಸ್ವಾಮಿ ವಿರುದ್ಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.