ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ದೇಶದಲ್ಲಿ ದೀನ-ದಲಿತ, ಶೋಷಿತ ವರ್ಗಗಳಿಗೆ ನಿಜವಾದ ಧ್ವನಿಯಾಗಿ ಸ್ವಾಭಿಮಾನ ಮೂಡಿಸುವಲ್ಲಿ ಶ್ರಮಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಅವರ ಪಾತ್ರ ಮಹತ್ವದ್ದಾಗಿದೆ. ಪರಿಶಿಷ್ಟರು, ಹಿಂದುಳಿದವರು, ಶೋಷಿತ ಜನಾಂಗದವರಿಗೆ ಸಂವಿಧಾನತ್ಮಕ ಹಕ್ಕುಗಳನ್ನು ಕಲ್ಪಿಸುವಲ್ಲಿ ಶ್ರಮಿಸಿದರಲ್ಲದೇ, ವಿಶ್ವವೇ ಹೆಮ್ಮೆ ಪಡುವಂತಹ ಭಾರತದ ಸಂವಿಧಾನವನ್ನು ರಚಿಸಿದ ಮಹಾನ್ ಶಿಲ್ಪಿಯಾಗಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಭಿಪ್ರಾಯಪಟ್ಟರು.
ಸೋಮವಾರ ಶಿರಹಟ್ಟಿಯಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ಶಿರಹಟ್ಟಿ ಹಾಗೂ ಶಿರಹಟ್ಟಿ ತಾಲೂಕಿನ ಎಲ್ಲ ದಲಿತ ಸಂಘಟನೆಗಳ ಅಶ್ರಯದಲ್ಲಿ ತಹಸೀಲ್ದಾರ ಕಚೇರಿ ಅವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರರ 134ನೇ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಂ ಅವರ 118ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ ಹೊಂಬಳ ಸರಕಾರಿ ಪ.ಪೂ ಕಾಲೇಜಿನ ಪ್ರಭಾರ ಪ್ರಾಚಾರ್ಯ ಹನಮಂತಪ್ಪ ಎಂ.ದೊಡ್ಡಮನಿ, ಡಾ.ಬಾಬು ಜಗಜೀವನರಾಮರ ಜೀವನ ಹಾಗೂ ಸಾಧನೆಗಳ ಕುರಿತು ಉಪನ್ಯಾಸ ನೀಡಿದರಲ್ಲದೆ, ಶೈಕ್ಷಣಿಕ ಪ್ರಗತಿಯಿಂದ ಮಾತ್ರ ದಲಿತ ಸಮುದಾಯದವರ ಸರ್ವಾಂಗೀಣ ಪ್ರಗತಿ ಸಾಧ್ಯ. ಈ ಹಿನ್ನೆಲೆಯಲ್ಲಿ ದಲಿತ ಸಮುದಾಯದ ಸಹೋದರರು ತಪ್ಪದೇ ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಕೊಡಿಸಬೇಕೆಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ಜ.ಫಕೀರೇಶ್ವರ ಮಠದಿಂದ ಡಾ. ಬಿ.ಆರ್. ಅಂಬೇಡ್ಕರ ಮತ್ತು ಡಾ. ಬಾಬು ಜಗಜೀವನರಾಂ ಅವರ ಬೃಹತ್ ಭಾವಚಿತ್ರದ ಮೆರವಣಿಗೆಗೆ ಶಾಸಕ ಡಾ. ಚಂದ್ರು ಲಮಾಣಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಚಾಲನೆ ನೀಡಿದರು.
ಪ.ಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ತಹಸೀಲ್ದಾರ ಅನಿಲ ಬಡಿಗೇರ, ಸಿಪಿಐ ನಾಗರಾಜ ಮಾಢಳ್ಳಿ, ತಾ.ಪಂ ಇಓ ಆರ್.ವಿ. ದೊಡ್ಡಮನಿ, ಸಮಾಜ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿ, ಆರ್‌ಎಫ್‌ಓ ಮೇಘನಾ ಎಚ್, ಬಿಇಓ ನಾಣ್ಕಿನಾಯ್ಕ, ಪಿಆರ್‌ಇಡಿ ಎಇಇ ಮಾರುತಿ ರಾಠೋಡ, ಆರ್‌ಡಬ್ಲ್ಯುಎಸ್ ಎಇಇ ಮಲ್ಲಿಕಾರ್ಜುನ ಪಾಟೀಲ, ಹೊನ್ನಪ್ಪ ಶಿರಹಟ್ಟಿ, ಹುಮಾಯೂನ್ ಮಾಗಡಿ, ನಾಗರಾಜ ಲಕ್ಕುಂಡಿ, ಡಿ.ಕೆ. ಹೊನ್ನಪ್ಪನವರ, ಪ.ಪಂ ಸದಸ್ಯರಾದ ಸಂದೀಪ ಕಪ್ಪತ್ತನವರ, ಫಕ್ಕಿರೇಶ ರಟ್ಟಿಹಳ್ಳಿ, ಜಾನು ಲಮಾಣಿ, ದೇವಪ್ಪ ಲಮಾಣಿ, ಎಂ.ಕೆ. ಲಮಾಣಿ, ಶಿವನಗೌಡ ಪಾಟೀಲ, ನಾಗರಾಜ ಪೋತರಾಜ, ರಮೇಶ ಮಲ್ಲಾಡದ, ಮೋಹನ ಗುತ್ತೆಮ್ಮನವರ, ಮಾರ್ತಾಂಡಪ್ಪ ಹಾದಿಮನಿ, ಹನಮಂತಪ್ಪ ಹುಯಿಲಗೋಳ, ತಿಮ್ಮರೆಡ್ಡಿ ಮರಡ್ಡಿ, ಸಂಜೀವ ಪೋತರಾಜ, ರವಿ ಗುಡಿಮನಿ, ಮುತ್ತುರಾಜ ಭಾವಿಮನಿ, ಅಕ್ಬರ ಯಾದಗೇರಿ, ಈರಣ್ಣ ಚವ್ಹಾಣ, ಸಿದ್ದು ಹಲಸೂರ ಮುಂತಾದವರು ಉಪಸ್ಥಿತರಿದ್ದರು.
ಡಾ. ಬಾಬು ಜಗಜೀವನರಾಮರ ಆದರ್ಶಗಳನ್ನು ಪಾಲಿಸುವದರ ಜತೆಗೆ ಜೀವನ ಸಾಧನೆ, ಆದರ್ಶಗಳು, ತತ್ವ ಸಿದ್ಧಾಂತಗಳನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಕಾರ್ಯ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಅವರುಗಳ ಜನ್ಮದಿನಾಚರಣೆಯಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.