ಗಜೇಂದ್ರಗಡ: ತಾಲ್ಲೂಕಿನ ಗುಳಗುಳಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಧ ದಲಿತ ಸಂಘಟನೆಗಳು ಆರೋಪಿಗಳ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿವೆ.
ಆದಿಜಾಂಬವ ಯುವ ಬ್ರಿಗೇಡ್ ಬೆಳಗಾವಿ ವಿಭಾಗೀಯ ಸಂಚಾಲಕ ಮಂಜುನಾಥ ಎಂ. ಬುರಡಿ ಪ್ರತಿಕ್ರಿಯಿಸಿ, “ಡಾ. ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬರಿಗೂ ಆರಾಧ್ಯ ವ್ಯಕ್ತಿ. ಇಂತಹ ಮಹನೀಯರಿಗೆ ಅವಮಾನ ಮಾಡಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಅಮಾನುಷ ಘಟನೆಗಳು ಮರುಕಳಿಸದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು,” ಎಂದು ಒತ್ತಾಯಿಸಿದರು.
ಎನ್. ಮೂರ್ತಿ ಬಣದ ಜಿಲ್ಲಾ ಅಧ್ಯಕ್ಷ ಡಿ.ಜಿ. ಕಟ್ಟಿಮನಿ ಮಾತನಾಡಿ, “ಅಂಬೇಡ್ಕರ್ ಅವರು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪ್ರತೀಕ. ದಲಿತಕೇರಿಯಲ್ಲಿ ನಡೆದಿರುವ ಈ ಕೃತ್ಯ ಮಾನವೀಯ ಮೌಲ್ಯಗಳಿಗೆ ವಿರುದ್ಧ. ಆರೋಪಿಗಳಿಗೆ ಉದಾಹರಣೀಯ ಶಿಕ್ಷೆ ಆಗಬೇಕು,” ಎಂದು ಹೇಳಿದರು.
ಘಟನೆ ತಿಳಿದ ತಕ್ಷಣ ತಹಶೀಲ್ದಾರ ಕಿರಣಕುಮಾರ್ ಕುಲಕರ್ಣಿ, ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ವಿಜಯಕುಮಾರ್ ನಾಯಕ ಹಾಗೂ ಪಿಎಸ್ಐ ಪ್ರಕಾಶ್ ಡಿ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸೋಮು ನಾಗರಾಜ್, ದುರುಗೇಶ್ ಹಿರೇಮನಿ, ಪುಂಡಲೀಕ್ ಮಾದರ, ಯಮನಪ್ಪ ಪುರ್ತಿಗೇರಿ, ಯಮನೂರಪ್ಪ ಅಬ್ಬಿಗೇರಿ, ಅಶೋಕ್ ಮಾದರ, ಹಣಮಂತ ಪೂಜಾರ್, ಮಹೇಶ ಕುರಬನಹಳ, ಭೀಮಪ್ಪ ದೊಡ್ಡಮನಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.



