ನೌಕರರ ಮನಗೆದ್ದ ಡಾ.ಬಸವರಾಜ ಬಳ್ಳಾರಿ

0
Spread the love

ಬಸವರಾಜ ಬಳ್ಳಾರಿಯವರು ಶೈಕ್ಷಣಿಕವಾಗಿ ಹಿಂದುಳಿದ ತಾಲೂಕಾದ ಮುಂಡರಗಿಯ ಹಿರೇವಡ್ಡಟ್ಟಿ ಗ್ರಾಮದ ಹಿಂದುಳಿದ ಸಮುದಾಯದಲ್ಲಿ 1977 ಜುಲೈ 23ರಂದು ಶ್ರಮಿಕ, ಕಾಯಕ ಕೈಲಾಸಯೋಗಿ ಸಾತ್ವಿಕ ತಂದೆ ವೆಂಕಪ್ಪ-ಮಾತೋಶ್ರಿ ನಾಗಮ್ಮನವರ ಪುಣ್ಯ ಗರ್ಭದಲ್ಲಿ ಪ್ರೀತಿಯ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಹಿರೇವಡ್ಡಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಪ್ರೌಢಶಾಲಾ ಅಭ್ಯಾಸವನ್ನು ಗದಗ ಬೆಟಗೇರಿ ರಾಣಾ ಪ್ರತಾಪಸಿಂಹ ಪ್ರೌಢಶಾಲೆಯಲ್ಲಿ ಪೂರೈಸಿ, ಪದವಿಪೂರ್ವ ಶಿಕ್ಷಣವನ್ನು ನಗರದ ಕೆ.ವ್ಹಿ.ಎಸ್.ಆರ್ ಕಾಲೇಜಿನಲ್ಲಿ ಹಾಗೂ ಪದವಿ ಶಿಕ್ಷಣವನ್ನು ಕೆ.ಎಸ್.ಎಸ್ ಮಹಾವಿದ್ಯಾಲಯದಲ್ಲಿ ಪಡೆದರು. ಗದುಗಿನ ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಪದವಿಯನ್ನು ವಿಶೇಷ ದರ್ಜೆಯಲ್ಲಿ ಉತ್ತೀರ್ಣರಾದರು.

Advertisement

ಪದವಿಧರರಾದ ಬಳ್ಳಾರಿಯವರು ಪ್ರಾರಂಭದಲ್ಲಿ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕರಾಗಿ, ನಂತರ ಬಿಸಿಎಮ್ ಇಲಾಖೆ ವಸತಿ ನಿಲಯ ಪಾಲಕರಾಗಿ ಸರಕಾರಿ ಸೇವೆಯನ್ನು ದಾವಣಗೇರಿ ಹಾಗೂ ಗದಗ ಜಿಲ್ಲೆಯ ವಿವಿಧೆಡೆ ಸಲ್ಲಿಸಿದರು. ಸರಕಾರಿ ಸೇವೆಗೆ ಸೇರಿದರೂ ನೀಗದ ಇವರ ಓದುವ ಹವ್ಯಾಸ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಭೂಗೋಳಶಾಸ್ತçದಲ್ಲಿ ಎಂ.ಎಸ್ಸಿ ಪದವಿ, ಎಂ.ಎಡ್ (ಶಿಕ್ಷಣ ಶಾಸ್ತç) ಪದವಿ ಮತ್ತು `ಕರ್ನಾಟಕ ರಾಜ್ಯದ ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿಯ ವಿದ್ಯಾರ್ಥಿಗಳು ಅಭ್ಯಾಸ ಮಾಡುವಲ್ಲಿಯ ಸಮಸ್ಯೆ’ಗಳ ಕುರಿತು ಸಂಶೋಧನಾ ಪ್ರಬಂಧವನ್ನು ನಾಡಿನ ಶ್ರೇಷ್ಠ ಶಿಕ್ಷಣ ತಜ್ಞ, ಹುಬ್ಬಳ್ಳಿ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಎನ್.ಬಿ. ಕೊಂಗವಾಡರವರ ಮಾರ್ಗದರ್ಶನದಲ್ಲಿ ಪಿಎಚ್‌ಡಿ ಪದವಿ ಪಡೆದು ತಮ್ಮ ವೈಯುಕ್ತಿಕ ವೃತ್ತಿ ಗೌರವ ಹೆಚ್ಚಿಸಿಕೊಂಡರು. ಬಿಸಿಎಮ್ ಇಲಾಖೆ ತಾಲೂಕಾ ಹಿಂದುಳಿದ ವರ್ಗಗಗಳ ಕಲ್ಯಾಣ ಅಧಿಕಾರಿಯಾಗಿ ಮುಂಡರಗಿ, ರೋಣ ಮತ್ತು ಪ್ರಸ್ತುತ ಗದಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮ ವೈಯುಕ್ತಿಕ ವೃತ್ತಿಯೊಂದಿಗೆ ಇಲಾಖೆಯ ನೌಕರರ ನೋವು-ನಲಿವುಗಳಲ್ಲಿ ಪಾಲ್ಗೊಂಡು ನೌಕರರ ಬೇಕು-ಬೇಡಿಕೆಗಳನ್ನು ಈಡೇರಿಸುವ ಕಾಯಕದ ಮೂಲಕ ನೌಕರರ ಸಂಘಟನೆಯ ನಾಯಕರಾಗಿ ಹೊರಹೊಮ್ಮಿದರು. ಕರ್ನಾಟಕ ರಾಜ್ಯದಲ್ಲಿ ವಸತಿ ನಿಲಯ ಮೇಲ್ವಿಚಾರಕರ ಸಂಘ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿಗಾಗಿ, ಕರ್ನಾಟಕ ಸರಕಾರಿ ನೌಕರರ ಸಂಘ ಬೆಂಗಳೂರು (ಬೆಳಗಾವಿ ವಿಭಾಗ) ಸಂಘಟನಾ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಮುಂಡರಗಿ ಶಾಖೆ ತಾಲೂಕಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಗದಗ ಜಿಲ್ಲಾ ಶಾಖೆಯ ಜಿಲ್ಲಾ ಗೌರವಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು ನೌಕರರ ಸಂಘಟನೆಯ ರಾಜ್ಯಮಟ್ಟದ ನಾಯಕನಾಗಿ ಮುನ್ನೆಲೆಗೆ ಬಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೌಕರ ಸಂಘಟನೆ ಜವಬ್ದಾರಿಯನ್ನು ಹೆಗಲಮೇಲೆ ಹೊತ್ತು ಕಳೆದ 25 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಪದೋನ್ನತಿ ಪ್ರಕ್ರಿಯೆಗೆ ಗೆಲವು ನೀಡಿದರು. ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ಗೌರವಾಧ್ಯಕ್ಷರಾಗಿದ್ದ ಪ್ರೇಮನಾಥ ಗರಗ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ಅಧ್ಯಕ್ಷರಾದ ರವಿ ಎಲ್.ಗುಂಜೀಕರವರ ಗರಡಿಯಲ್ಲಿ ಸಂಘಟನೆಯ ಒಳ-ಹೊರಹರಿವಿನ ಪರಿಚಯ ಪಾಠವನ್ನು ಬಹಳ ಶ್ರದ್ಧೆಯಿಂದ ಕಲಿತುಕೊಂಡು ಸಂಘಟನೆಯ ಪ್ರಮುಖ ಹುದ್ದೆಗಳನ್ನು ಮತ್ತು ಸಂಘಟನೆಯ ಹೋರಾಟ, ನೌಕರರ ಸಮ್ಮೇಳನ, ಸಭೆ, ಕ್ರೀಡಾಕೂಟ ಎಲ್ಲಾ ವಿದಾಯಕ ಉಪಕ್ರಮಗಳನ್ನು ಸಮರ್ಥವಾಗಿ ನಿರ್ವಹಿಸಿ ನೌಕರರ ಮನದಾಳದಲ್ಲಿ ಗೌರವ ಸ್ಥಾನ ಪಡೆದುಕೊಂಡರು. ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ಮೂರು ಅವಧಿಗೆ ಅಧ್ಯಕ್ಷರಾಗಿ ಪ್ರಾಮಾಣಿಕತೆಯಿಂದ ನೌಕರರ ಸೇವೆ ಮಾಡಿ ಪ್ರೀತಿಗೆ ಪಾತ್ರರಾಗಿದ್ದ ಡಾ. ರವಿ ಗುಂಜೀಕರರು ಸೇವಾ ನಿವೃತ್ತಿ ಹೊಂದಿದಾಗ ಗದಗ ಜಿಲ್ಲೆಯ ನೌಕರ ಸಂಘಟನೆಯ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆ ಎದುರಾಗಿತ್ತು. ಆಗ ಡಾ. ಬಸವರಾಜ ಬಳ್ಳಾರಿಯವರು ಸಂಘಟನಾ ಚತುರತೆ, ಕರ್ತವ್ಯ ನಿಭಾಯಿಸುವ ಚಲನಶೀಲತೆಯ ಪರೀಕ್ಷೆಗಳಲ್ಲಿ ಪೂರ್ಣ ಅಂಕ ಪಡೆದಿದ್ದರು. ಗದಗ ಜಿಲ್ಲಾ ಸರಕಾರಿ ನೌಕರ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿದಾಗ ಆಯ್ಕೆ ಕಾನೂನಬಾಹಿರ ಎಂದು ವಿರೋಧಿಸಿ ಪ್ರತಿಭಟಿಸಿದಾಗ ಚುನಾವಣೆ ಪ್ರಕ್ರಿಯೆಯಲ್ಲಿ ಡಾ. ಬಸವರಾಜ ಬಳ್ಳಾರಿ ಗೆಲವು ಸಾಧಿಸಿ ವಿರೋಧ ಬಣಕ್ಕೆ ತಕ್ಕ ಉತ್ತರ ಕೊಟ್ಟರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವನ್ನು ಸದಾ ಕ್ರಿಯಾತ್ಮಕವಾಗಿ ಮುನ್ನಡೆಸುತ್ತ 2ನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಸಿ.ಎಸ್. ಷಡಾಕ್ಷರಿಯವರ ದೂರದೃಷ್ಟಿ ಚಿಂತನೆ ಮತ್ತು ಹೋರಾಟದಲ್ಲಿ ಎನ್.ಪಿ.ಎಸ್ ರದ್ದುಪಡಿಸಿ ಓ.ಪಿ.ಎಸ್ ಜಾರಿ, ವಿವಿಧ ವೃಂದ ನೌಕರರ ಸಿ&ಆರ್ ಹೋರಾಟ, ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರದ ಸಮಾನವೇತನ, ಜ್ಯೋತಿ ಸಂಜೀವಿನಿ ಅನುಷ್ಠಾನ, ಬಡ್ತಿ ಪ್ರಕ್ರಿಯೆಗೆ ಚಾಲನೆ, ನೌಕರರ ಸುಖ-ದುಃಖಗಳಿಗೆ ಪ್ರಾಮಾಣಿಕ ಸ್ಪಂದನೆ, ಜನಸ್ನೇಹಿ ಆಡಳಿತಗಳ ಮೂಲಕ ಸಾರ್ವಜನಿಕರರಿಗೆ ನ್ಯಾಯ ಒದಗಿಸುವ ಕಾರ್ಯಕ್ಕೆ ಡಾ. ಬಸವರಾಜ ಬಳ್ಳಾರಿಯವರ ಕ್ರಿಯಾಶೀಲ ತಂಡ ಕೈಜೋಡಿಸುತ್ತಿದೆ. ನೌಕರ ಸಂಘದಿಂದ ಆಯೋಜನೆಗೊಳ್ಳುವ ಕ್ರೀಡಾಕೂಟ, ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ರಾಜ್ಯಮಟ್ಟದ ಕಾರ್ಯಾಗಾರ, ಸಮ್ಮೇಳನ, ವಿವಿಧ ಸೌಲಭ್ಯಗಳ ಕಾರ್ಯಾನುಷ್ಠಾನ ಉಪಕ್ರಮಗಳನ್ನು ಬಹಳ ವ್ಯವಸ್ಥಿತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಗದಗ ಶಹರದ ಕೆವಿಎಸ್‌ಆರ್ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ತ್ಯಾಗಮೂರ್ತಿ, ಸಹನಶೀಲ, ಗುಣಶೀಲ ಮತ್ತು ಮನೆತನದ ನಿರ್ವಹಣೆಯಲ್ಲಿಯ ಸಹಕಾರ, ತನ್ನೆಲ್ಲಾ ಬೆಳವಣಿಗೆಗೆ ಕಾರಣರಾದ ಸಹಧರ್ಮಿಣಿ ಪುಷ್ಪಾವತಿ ಅವರನ್ನು ಆಗಾಗ ಬಸವರಾಜ ಬಳ್ಳಾರಿಯವರು ನೆನಪಿಸಿಕೊಳ್ಳುತ್ತಾರೆ. ಹಿರಿಯ ಪುತ್ರಿ ಸ್ಪೂರ್ತಿ ಎಮ್.ಬಿ.ಬಿ.ಎಸ್, ಕಿರಿಯ ಪುತ್ರಿ ಸಂಪ್ರೀತಿ ಎಸ್‌ಎಸ್‌ಎಲ್‌ಸಿ ಹಾಗೂ ಪುತ್ರ ಸುಹಾಸ ಪ್ರೌಢಶಿಕ್ಷಣ ಪಡೆಯುತ್ತಿದ್ದಾರೆ. ಸುಖೀ ಜೀವನ ಪಯಣದ ಪಥದಲ್ಲಿ ಮುಂಡರಗಿ ತಾ.ಪಂ ಸದಸ್ಯರಾಗಿ ಎರಡು ಬಾರಿ ಚುನಾಯಿತರಾದ ಇವರ ತಂದೆ ವೆಂಕಪ್ಪನವರು ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ, ಸ್ಥಾಯಿ ಕಮಿಟಿ ಚೇರಮನ್‌ರಾಗಿ ಜನಸೇವೆ ಮೂಲಕ ಚಿರಪರಿಚಿತರಾದರೆ, ತಾಯಿ ನಾಗಮ್ಮ ಎರಡು ಅವಧಿಗೆ ಗ್ರಾ.ಪಂ ಸದಸ್ಯರಾಗಿ ಚುನಾಯಿತರಾಗಿ, ಎರಡು ಅವಧಿಯಲ್ಲಿ ಅಧ್ಯಕ್ಷರಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ. ಮುಂಡರಗಿ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸಹೋದರ ಮಂಜುನಾಥ, ಅವರ ಧರ್ಮಪತ್ನಿ ಶೀಲಾವತಿ ಹಮ್ಮಿಗಿಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ, ಇನ್ನೋರ್ವ ಸಹೋದರ ರಾಮಚಂದ್ರ ಹುಬ್ಬಳ್ಳಿ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಅವರ ಧರ್ಮಪತ್ನಿ ಶೋಭಾವತಿ ಗದಗ ನ್ಯಾಯಾಲಯದಲ್ಲಿ ಎಸ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸಿದರೆ, ಕೊನೆಯ ಸಹೋದರ ಸಿದ್ದರಾಮ ತಂದೆಯವರೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಮೀನಗಡದಲ್ಲಿ ಪ್ರೌಢಶಾಲಾ ಶಿಕ್ಷಕರಾಗಿರುವ ಪ್ರೇಮನಾಥನೊಂದಿಗೆ ಸಪ್ತಪದಿ ತುಳಿದ ಸಹೋದರಿ ನಾಗರತ್ನ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಹುನಗುಂದದಲ್ಲಿ ನೆಲೆಸಿದ್ದಾರೆ. ಸೋದರತ್ತೆ ಟಿ.ಟಿ. ಬಿಸನಳ್ಳಿಯವರು ನಿವೃತ್ತ ಮುಖ್ಯೋಪಾಧ್ಯಾರಾಗಿ ವಿಶ್ರಾಂತ ಜೀವನವನ್ನು ಇವರೊಟ್ಟಿಗೆ ಕಳೆಯುತ್ತಿದ್ದಾರೆ. 5 ಗಂಡು ಮಕ್ಕಳು, 6 ಹೆಣ್ಣು ಮಕ್ಕಳು ಸೇರಿ ಒಟ್ಟು 22 ಸದಸ್ಯರನ್ನು ಒಳಗೊಂಡಿರುವ ಬಳ್ಳಾರಿಯವರ ಮನೆತನ ಆಧುನಿಕ ಅವಿಭಕ್ತ ಕುಟುಂಬದೊಂದಿಗೆ ಸಾರ್ಥಕ ಬದುಕು ಸಾಗಿಸುತ್ತ ಆದರ್ಶಪ್ರಾಯರಾಗಿದ್ದಾರೆ.

ಡಾ. ಬಸವರಾಜ ಬಳ್ಳಾರಿ ಅವರ ಸರಕಾರಿ ಸೇವೆಯನ್ನು ಗುರುತಿಸಿದ ಕರ್ನಾಟಕ ಸರಕಾರ ಗದಗ ಜಿಲ್ಲಾ ಸರ್ವೋತ್ತಮ ಪ್ರಶಸ್ತಿ ಹಾಗೂ ಸಂಘಟನೆ, ಸಾಮಾಜಿಕ, ಶೈಕ್ಷಣಿಕ ಸೇವೆ ಪರಿಗಣಿಸಿ ಡಾ. ರಾಜಕುಮಾರ ಸದ್ಭಾವನಾ ರಾಜ್ಯ ಪ್ರಶಸ್ತಿ, ದಾನ ರತ್ನ ಪ್ರಶಸ್ತಿ, ಕಾರ್ಯಾಂಗಶ್ರೀ ವಿಶ್ವವಿಜಯರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿದರೆ, 2024ರಲ್ಲಿ ವಿಶ್ವವಾಣಿ ದಿನಪತ್ರಿಕೆ ಜಪಾನ್‌ನ ಟೋಕಿಯೋದಲ್ಲಿ ಗ್ಲೋಬಲ್ ಅಚೀವರ್ಸ್ ಬಿರುದು ನೀಡಿ ಗೌರವಿಸಿದೆ.

ಡಾ. ಬಸವರಾಜ ಬಳ್ಳಾರಿಯವರ ಅಧಿಕಾರಾವಧಿಯಲ್ಲಿ ಜಿಲ್ಲೆಯ ನೌಕರ ಬಾಂಧವರ ಬೇಕು-ಬೇಡಿಕೆಗಳು ಈಡೇರಲಿ. ನೌಕರರ ನೋವು-ನಲಿವುಗಳಿಗೆ ಸದಾ ಸ್ಪಂದಿಸಿ ಇವರ ಮೇಲೆ ಇಟ್ಟಿರುವ ಗೌರವ ಹೆಚ್ಚಾಗಲಿ ಮತ್ತು ಸಂಘಟನೆಯ ಚಟುವಟಿಕೆಗಳು ಸಂಪೂರ್ಣ ಅನುಷ್ಠಾನಗೊಂಡು ಅನುಕರಣೀಯವಾಗಲೆಂದು ನಾಡಿನ ಅನೇಕ ಮಠಾಧೀಶರು, ಜನಪ್ರತಿನಿಧಿಗಳು, ಬಿ.ಸಿ.ಎಮ್ ಇಲಾಖೆ ಆಪ್ತರು, ಜಿಲ್ಲೆಯ ಸಮಸ್ತ ನೌಕರ ಬಾಂಧವರು, ಅವರ ಅಭಿಮಾನಿ ಬಳಗ, ಸ್ನೇಹಿತರು, ವಿದ್ಯಾರ್ಥಿ ಬಳಗದವರು ಶುಭಹಾರೈಸಿ ಅಭಿನಂದಿಸಿದ್ದಾರೆ.

– ವಿಶ್ವನಾಥ ಯ.ಕಮ್ಮಾರ.

ಅಧ್ಯಾಪಕರು,

ಬಿವಿಬಿ ಗೆಳಯರ ಬಳಗ-ಗದಗ.


Spread the love

LEAVE A REPLY

Please enter your comment!
Please enter your name here