ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸ, ಸಮಾಜ, ಸಂಗೀತ, ಮಾನವೀಯ ಜೀವನ ಮೌಲ್ಯಗಳನ್ನು ಕಾದಂಬರಿ ಸಾಹಿತ್ಯದ ಮೂಲಕ ಮನಮುಟ್ಟುವಂತೆ ಚಿತ್ರಿಸಿ ಭಾರತೀಯ ಕಾದಂಬರಿ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತವಾಗಿಸಿರುವ ಡಾ. ಎಸ್.ಎಲ್. ಭೈರಪ್ಪನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತವೆಂದು ಪ್ರೊ. ಸುಧಾ ಕೌಜಗೇರಿ ಅಭಿಪ್ರಾಯಪಟ್ಟರು.
ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗವು ಐಕ್ಯುಎಸಿ ಘಟಕದ ಅಡಿಯಲ್ಲಿ ಹಮ್ಮಿಕೊಂಡಿದ್ದ ‘ಡಾ. ಎಸ್.ಎಲ್. ಭೈರಪ್ಪ ನುಡಿನಮನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ವಿಶಿಷ್ಟ ಶೈಲಿಯ ಬರಹದಿಂದ ಅಪಾರ ಸಂಖ್ಯೆಯ ಓದುಗರನ್ನು ಸೃಷ್ಟಿಸಿಕೊಂಡಿರುವ ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಕಾಯ್ದುಕೊಂಡ ಕನ್ನಡನಾಡಿನ ಅಪೂರ್ವ ಲೇಖಕರಾಗಿದ್ದು, ಅವರ ಬರಹ ಮತ್ತು ವ್ಯಕ್ತಿತ್ವ ಯುವಕರಿಗೆ ದಾರಿದೀಪವೆಂದು ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಮತ್ತು ಎನ್.ಎಸ್.ಎಸ್ ಘಟಕದ ಸಂಯೋಜಕ ಪ್ರೊ. ಅಪ್ಪಣ್ಣ ಹಂಜೆ ‘ಭೈರಪ್ಪನವರ ಕಾದಂಬರಿಗಳಲ್ಲಿ ಐತಿಹಾಸಿಕ ಚಿಂತನೆಗಳು’, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಉಲ್ಲಾಸ ಶೆಟ್ಟಿ ‘ಭೈರಪ್ಪನವರ ಕಾದಂಬರಿಗಳಲ್ಲಿ ವೈಜ್ಞಾನಿಕ ವಿಚಾರಗಳು’, ಪ್ರೊ. ಲಕ್ಷ್ಮಣ ಮುಳಗುಂದ ‘ಭೈರಪ್ಪನವರ ಕಾದಂಬರಿಗಳಲ್ಲಿ ದೈನಂದಿನ ವ್ಯವಹಾರಿಕ ಸಂಗತಿಗಳು’, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಐಕ್ಯುಎಸಿ ಘಟಕದ ಸಂಯೋಜಕ ಡಾ. ಜಿತೇಂದ್ರ ಜಹಾಗೀರದಾರ ‘ಭೈರಪ್ಪನವರ ಕಾದಂಬರಿಗಳಲ್ಲಿ ತಾತ್ವಿಕ ಚಿಂತನೆಗಳು’, ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಸಾಂಸ್ಕೃತಿಕ ವಿಭಾಗದ ಸಂಯೋಜಕ ರಮೇಶ ಹುಲಕುಂದ ‘ಭೈರಪ್ಪನವರ ಕಾದಂಬರಿಗಳಲ್ಲಿ ಮಾನವೀಯ ಜೀವನ ಮೌಲ್ಯಗಳು’, ಕನ್ನಡ ಪ್ರಾಧ್ಯಾಪಕ ಭೀಮೇಶ ‘ಭೈರಪ್ಪನವರ ಕಾದಂಬರಿಗಳಲ್ಲಿ ಗ್ರಾಮೀಣ ಬದುಕು’, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಸುಭಾಸ ಹರಿಹರ ‘ಭೈರಪ್ಪನವರ ಕಾದಂಬರಿಗಳಲ್ಲಿ ರಾಜಕೀಯ ವಿಚಾರಗಳು’, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಮಹಾನಂದಾ ಹಿರೇಮಠ ‘ಆಂಗ್ಲ ಭಾಷೆಗೆ ಅನುವಾದಿತ ಭೈರಪ್ಪನವರ ಕಾದಂಬರಿಗಳ ವೈಶಿಷ್ಟ್ಯತೆ’, ಇಂಗ್ಲೀಷ್ ಪ್ರಾಧ್ಯಾಪಕಿ ಸಾವಿತ್ರಿ ಟಿ ‘ಭೈರಪ್ಪನವರ ಕಾದಂಬರಿಗಳ ಜನಪ್ರಿಯತೆ ಮತ್ತು ಪ್ರಸ್ತುತತೆ’ ಕುರಿತು ಮಾತನಾಡುತ್ತ ನುಡಿನಮನ ಸಲ್ಲಿಸಿದರು.