ವಿಜಯಸಾಕ್ಷಿ ಸುದ್ದಿ, ಗದಗ: ದೇಶದ ಮಾಜಿ ಪ್ರಧಾನಿ, ಆರ್ಥಿಕ ತಜ್ಞ, ಮುತ್ಸದ್ಧಿ ರಾಜಕಾರಣಿ ಡಾ. ಮನಮೋಹನ್ ಸಿಂಗ್ ಅವರ ಅಗಲುವಿಕೆಯಿಂದ ದೇಶವು ಒಬ್ಬ ಶ್ರೇಷ್ಠ, ಅನುಭವಿ ಆರ್ಥಿಕ ತಜ್ಞನನ್ನು ಕಳೆದುಕೊಂಡಂತಾಗಿದೆ. ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಹಣಕಾಸು ಸಚಿವರಾಗಿ ಇದೆಲ್ಲಕ್ಕೂ ಮಿಗಿಲಾಗಿ ದೇಶದ ನೆಚ್ಚಿನ ಪ್ರಧಾನಿಯಾಗಿ ಅವರು ಸಲ್ಲಿಸಿದ ಸೇವೆ ಅಪೂರ್ವ ಹಾಗೂ ಅನುಪಮ. ದೇಶದ ಅರ್ಥ ವ್ಯವಸ್ಥೆಗೆ ಭದ್ರ ಬುನಾದಿ ಒದಗಿಸಿದ ಶ್ರೇಯಸ್ಸು ಡಾ. ಸಿಂಗ್ ಅವರಿಗೆ ಸಲ್ಲುತ್ತದೆ ಎಂದು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೌನ ಬಂಗಾರ, ಮಾತು ಬೆಳ್ಳಿ ಎಂಬಂತೆ ಬದುಕಿದ ಡಾ. ಮನಮೋಹನ್ ಸಿಂಗ್ ಅವರು ಮಾತಿಗಿಂತಲೂ ಕೃತಿಗೆ ಮಹತ್ವ ನೀಡಿದವರು. ನಿಷ್ಕಳಂಕ ಚಾರಿತ್ರö್ಯದ ಅವರ ಆದರ್ಶದ ಬದುಕು ಎಲ್ಲರಿಗೂ ಮಾದರಿ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.