ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇಡೀ ಜಗತ್ತೇ ಬೆರಗಾಗುವಂತೆ ಆರ್ಥಿಕ ಸುಧಾರಣೆಗಳನ್ನು ಮಾಡುತ್ತಾ, ಸರಳ ಸಜ್ಜನಿಕೆಯಿಂದ ೧೦ ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಡಾ. ಮನಮೋಹನ್ ಸಿಂಗ್ ರಾಜಕಾರಣಕ್ಕೆ ಸದಾ ಆದರ್ಶವಾಗಿದ್ದಾರೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ದೇಶದಲ್ಲಿ ಬಡತನ ನಿರ್ಮೂಲನೆಗಾಗಿ, ಹಸಿವಿನಿಂದ ಯಾರೂ ಬಳಲಬಾರದೆನ್ನುವ ಉದ್ದೇಶದಿಂದ ಆಹಾರ ಭದ್ರತಾ ಯೋಜನೆ ಜಾರಿ, ಪ್ರತಿಯೊಬ್ಬರಿಗೂ ಶಿಕ್ಷಣ ಸಿಗವುದಕ್ಕಾಗಿ ಸರ್ವ ಶಿಕ್ಷಣ ಅಭಿಯಾನ, ನಗರ ಪ್ರದೇಶಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗಳು,ಸ್ತ್ರೀ ಸಬಲೀಕರಣ, ಆಧಾರ್, ಆರ್‌ಟಿಐ ಹಾಗೂ ೭೨ ಸಾವಿರ ಕೋಟಿ ರೂ ರೈತರ ಸಾಲ ಮನ್ನಾ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮಾನಸದಲ್ಲಿ ಉಳಿದಿದ್ದಾರೆ.
೩೩ ವರ್ಷ ರಾಜ್ಯಸಭೆ ಸದಸ್ಯರಾಗಿ, ಹಲವು ವಿ.ವಿಗಳಿಂದ ಡಾಕ್ಟರೇಟ್ ಪದವಿ, ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ, ಪಿ.ವ್ಹಿ. ನರಸಿಂಹರಾವ್ ಅವರ ಅವಧಿಯಲ್ಲಿ ವಿತ್ತ ಸಚಿವರಾಗಿ ಸೇವೆ ಸಲ್ಲಿಸಿ ಅನೇಕರಿಗೆ ಮಾದರಿಯಾಗಿದ್ದರು. ಪ್ರಸ್ತುತ ಆರ್ಥಿಕ ಬಿಕ್ಕಟ್ಟುಗಳನ್ನು ಸರಿದೂಗಿಸುವುದಕ್ಕಾಗಿ ಅವರ ಸಲಹೆ ಸೂಚನೆಯನ್ನು ಪಡೆಯಲಾಗುತ್ತಿತ್ತು. ಇಂತಹ ಆದರ್ಶಪ್ರಾಯ ಮಾಜಿ ಪ್ರಧಾನಿ ಅವರ ಆದರ್ಶ ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಿದೆ ಎಂದರು.