ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರು ಹಾಗೂ ಪದವೀಧರ ಘಟಕದ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ರಾಣೇಬೆನ್ನೂರಿನ ಡಾ. ಆರ್.ಎಂ. ಕುಬೇರಪ್ಪ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಸಿ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಅಧಿಕೃತ ಅರ್ಜಿ ಸಲ್ಲಿಸಿದರು.
ಕಳೆದ 2020ರ ಚುನಾವಣೆಯಲ್ಲಿ ಸದರಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಡಾ. ಕುಬೇರಪ್ಪ, 28 ಕ್ಷೇತ್ರಗಳಲ್ಲಿ ಕೇವಲ 3-4 ಶಾಸಕರಿದ್ದ ಸಂದರ್ಭದಲ್ಲಿ ಪಕ್ಷಕ್ಕಾಗಿ ದುಡಿದಿದ್ದಾರೆ. ಈಗ ರಾಜಕೀಯ ಪರಿಸ್ಥಿತಿ ನಮ್ಮ ಪರವಾಗಿದ್ದು, ಇಡೀ ಕ್ಷೇತ್ರದಲ್ಲಿ ಅತಿಹೆಚ್ಚು ಕಾಂಗ್ರೆಸ್ ಶಾಸಕರನ್ನು ಹೊಂದಿದ್ದು, ನಿರುದ್ಯೋಗಿ ಪದವೀಧರರಿಗೆ ಯುವನಿಧಿಯಲ್ಲಿ ಭತ್ಯೆ ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ತಮ್ಮ ಬಗ್ಗೆ ಮತದಾರರ ಒಲವಿದೆ. ತಮಗೆ ಪಕ್ಷ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾಗಿ ಡಾ. ಕುಬೇರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನಮಂತಗೌಡ ಕಲ್ಮನಿ, ಆರ್. ಗೋಪಾಲ ರೆಡ್ಡಿ, ಎಸ್.ಹೆಚ್. ಹುಚಗೊಂಡರ ಹಾಗೂ ಶಿಕ್ಷಕರ ಸಂಘಟನೆಯ ರಾಜ್ಯಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.


