ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲೋಕ ಕಲ್ಯಾಣಕ್ಕಾಗಿ ಮೌನಾನುಷ್ಠಾನದಂತಹ ಕಠಿಣ ತಪಸ್ಸನ್ನು ಕೈಗೊಳ್ಳುವ ಸ್ವಾಮೀಜಿಗಳ ಸಮರ್ಪಣಾ ಮನೋಧರ್ಮಕ್ಕೆ ನಾಡಿನ ಭಕ್ತ ಕುಲಕೋಟಿ ಕೃತಾರ್ಥರಾಗಿರೋಣ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರ ತಾಲೂಕಿನ ಆದರಹಳ್ಳಿ ಗ್ರಾಮದ ಶ್ರೀ ಗವಿಸಿದ್ದೇಶ್ವರ ಮಠದ ಡಾ.ಕುಮಾರ ಮಹಾರಾಜ ಶ್ರೀಗಳು ಗಾಳಿ ಬೆಳಕು ಇಲ್ಲದ ಗವಿಯೊಳಗೆ 12 ದಿನಗಳಿಂದ ಕೈಗೊಂಡ ನಿರಾಹಾರ ಮೌನಾನುಷ್ಠಾನ ಕಾರ್ಯಕ್ರಮದ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮೌನಾನುಷ್ಠಾನ ಎಂಬುದು ಆಧ್ಯಾತ್ಮಿಕವಾಗಿ ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳುವುದಾಗಿದೆ. ಇದರಿಂದ ಆತ್ಮ ಶುದ್ಧಿಗೊಳ್ಳುತ್ತದೆ. ಮೌನಾನುಷ್ಠಾನದಿಂದ, ದೇವರ ಪೂಜೆ, ಪ್ರಾರ್ಥನೆಗಳನ್ನು ಮಾಡುವುದರಿಂದ ಆತ್ಮ ಶುದ್ಧಿ, ಸಂತೋಷ, ನೆಮ್ಮದಿ ದೊರೆಯುತ್ತದೆ. ಇಂತಹ ಸಿದ್ಧಿಯಿಂದ ದೇವರನ್ನು ಹತ್ತಿರಕ್ಕೆ ಬರಮಾಡಿಕೊಳ್ಳುವ ಬಹುದೊಡ್ಡ ಸಂಕಲ್ಪದಲ್ಲಿ ಆದರಹಳ್ಳಿ ಶ್ರೀ ಗವಿಸಿದ್ದೇಶ್ವರಮಠದ ಡಾ.ಕುಮಾರ ಮಹಾರಾಜರು ಯಶಸ್ವಿಯಾಗಿದ್ದಾರೆ. ಜ್ಞಾನವು ದೇವರನ್ನು ಸ್ತುತಿಸುವುದಕ್ಕೋಸಕರ ಬಳಸುವ ಏಕೈಕ ಮಾರ್ಗವಾಗಿದೆ ಎಂದರು.
ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅಗಡಿ ಕಲ್ಮಠದ ಶ್ರೀ ಗುರುಶಿದ್ದ ಮಹಾಸ್ವಾಮಿಗಳು, ಕುಂದಗೋಳದ ಅಭಿನವ ಬಸವಣ್ಣಜ್ಜನವರು, ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಮಹಾಸ್ವಾಮಿಗಳು, ಮುಡಿಯ ಶ್ರೀ ಸದಾಶಿವ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಡಾ.ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ವೆಂಕಟೇಶ ರಾಠೋಡ ಮಾತನಾಡಿದರು.
ವೇದಿಕೆಯಲ್ಲಿ ತಹಸೀಲ್ದಾರ್ ವಾಸುದೇವಸ್ವಾಮಿ, ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಶಾರದಾ ಸೂರ್ಯಾನಾಯ್ಕ್, ಸರಿಗಮಪ ಖ್ಯಾತಿಯ ರಮೇಶ ಲಮಾಣಿ, ಸುನೀಲ್ ಮಹಾಂತಶೆಟ್ಟರ, ಮಂಜುನಾಥ ಮಾಗಡಿ, ವೆಂಕಟೇಶ ರಾಠೋಡ, ಹೊನ್ನಪ್ಪ ವಡ್ಡರ, ಲಕ್ಷ್ಮಣ ವಡ್ಡರ, ಅನಿಲ ಮುಳುಗುಂದ, ಪ್ರಶಾಂತ ಪೂಜಾರ, ತಿಪ್ಪಣ್ಣ ಲಮಾಣಿ, ಪರಶುರಾಮ ನಾಯಕ, ನಾಗೇಶ್ ಲಮಾಣಿ, ಮಾನು ಲಮಾಣಿ, ಮಂಜು ಮಂತ್ರಿ, ಅಲ್ಲಾಭಕ್ಷಿ ವಾಲಿಕಾರ, ಚಂದ್ರಕಾಂತ ಲಮಾಣಿ, ಲಕ್ಷ್ಮಣ ನಾಯಕ, ಗೋಪಿ ನಾಯಕ, ರಾಮಕೃಷ್ಣ ವನಶ್ರೀ, ಜಯಂತ ಮಾವಕೊಪ್ಪ, ಪರಮೇಶ ಸಿದ್ದಾಪುರ, ದ್ಯಾಮಣ್ಣ ಬೈರಾಪುರ, ವಿರೂಪಾಕ್ಷಪ್ಪ ಕಲಿವಾಳ ಮುಂತಾದವರಿದ್ದರು. ಶಶಿಕಾಂತ ರಾಠೋಡ ಸ್ವಾಗತಿಸಿದರು, ಚಂದ್ರು ಅಂಟಿನ್ ನಿರೂಪಿಸಿದರು. ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಮಹಾಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಗತ್ತಿಗೆ ಬೆಳಕು ನೀಡುವಂತಹ ಶ್ವೇತವರ್ಣಧಾರಿಗಳಾಗಿರುವ ಕುಮಾರ ಮಹಾರಾಜರ ಅನುಷ್ಠಾನ ಕಷ್ಟದ ಅನುಷ್ಠಾನವಾಗಿದೆ. ಇದನ್ನು ಸಾಧಿಸಲು ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಾದ ಮತ್ತು ಅವರಲ್ಲಿರುವ ಅಂತಃಶಕ್ತಿ ಕಾರಣವಾಗಿದೆ. ಕುಮಾರ ಮಹಾರಾಜರ ಸಂಕಲ್ಪ ಮತ್ತು ಅನುಷ್ಠಾನ ಶುದ್ಧಿಯಿಂದ ಕೂಡಿದೆ ಎಂದು ಹೇಳಿದ ಅವರು, ಇದೊಂದು ಧಾರ್ಮಿಕ ಕೇಂದ್ರವಾಗಿ ಮುಂದಿನ ದಿನಗಳಲ್ಲಿ ಹೆಸರು ಮಾಡಲಿದೆ. ಆದರಳ್ಳಿ ಗವಿಸಿದ್ದೇಶ್ವರಮಠದ ಅಭಿವೃದ್ಧಿಯ ವಿಷಯದಲ್ಲಿ ಶ್ರೀಗಳು ಕೈಗೊಳ್ಳುವ ಎಲ್ಲ ಕಾರ್ಯಗಳಿಗೂ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಸಂಸದ ಬೊಮ್ಮಾಯಿ ಹೇಳಿದರು.