ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಕನ್ನಡ ಸಾಂಸ್ಕೃತಿಕ ಪರಿಚಾರಕಿ, ಮಾಜಿ ಸಚಿವೆ ಡಾ. ಲೀಲಾದೇವಿ ಆರ್.ಪ್ರಸಾದ್ ಕರ್ನಾಟಕ ಕಂಡ ಅಪರೂಪದ ಮಹಿಳಾ ಸಾಧಕಿಯರಲ್ಲೊಬ್ಬರು. ರಾಜಕೀಯ ಹಾಗೂ ಸಾಂಸ್ಕೃತಿಕ ಸಾಹಿತ್ಯಗಳೆರಡರಲ್ಲೂ ವೈಶಿಷ್ಟ್ಯ ಮೆರೆದು ಯಶಸ್ಸು ಗಳಿಸಿದವರಾಗಿದ್ದಾರೆ ಎಂದು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಕವಿ, ವಿಮರ್ಶಕ ಡಾ. ರಾಜೇಂದ್ರ ಎಸ್.ಗಡಾದ ಹೇಳಿದರು.
ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಬಸವ ಸಮಿತಿ, ಕದಳಿ ಮಹಿಳಾ ವೇದಿಕೆಗಳು ಬೆಂಗಳೂರಿನ ಬಸವಭವನದಲ್ಲಿ ಏರ್ಪಡಿಸಿದ್ದ `ಶರಣೆ ಡಾ. ಲೀಲಾದೇವಿ ಆರ್.ಪ್ರಸಾದ್- 92 ಸಾರ್ಥಕ ಬದುಕಿನ ಸುಂದರ ಪಯಣ’ ಅಭಿನಂದನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
1957ರಲ್ಲಿಯೇ ಬೆಂಗಳೂರು ಮಹಾನಗರಪಾಲಿಕೆ ಸದಸ್ಯರಾಗಿ ಸಾಮಾಜಿಕ, ರಾಜಕೀಯ ಜೀವನ ಪ್ರಾರಂಭಿಸಿ, ಮುಂದೆ ಶಾಸಕಿಯಾಗಿ, ಸಚಿವೆಯಾಗಿ, ರಾಜ್ಯಸಭಾ ಸದಸ್ಯರಾಗಿ ರಾಜಕೀಯ ಸೇವೆ ಸಲ್ಲಿಸಿದರು. ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ, ಅದರಲ್ಲೂ ವಿಶೇಷವಾಗಿ ಸಹಕಾರ ಕ್ಷೇತ್ರ, ಮಹಿಳಾ ಸಂಘಟನೆಯಲ್ಲಿ ಡಾ. ಲೀಲಾದೇವಿಯವರು ವಹಿಸಿರುವ ಪಾತ್ರ ಶ್ಲಾಘನೀಯವಾದದು. ಸಾಹಿತ್ಯ ಲೋಕದಲ್ಲೂ ಗಣನೀಯ ಕೊಡುಗೆ ನೀಡಿರುವ ಅವರು, ಸಾಹಿತ್ಯದ ವಿವಿಧ ಪ್ರಕಾರದ 30ಕ್ಕೂ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಅವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯದ ಅನುಪಮ ಸೇವೆಗೆ ವಿಜಯಪುರ ಮಹಿಳಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದರೆ, ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಸಹಕಾರ ರತ್ನ ಪ್ರಶಸ್ತಿ, ‘ಅಕ್ಕ’ ರಾಜ್ಯ ಪ್ರಶಸ್ತಿಯನ್ನ ನೀಡಿ ಗೌರವಿಸಿವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಸವ ಸಮಿತಿಯ ಉಪಾಧ್ಯಕ್ಷ ಪ್ರಭುದೇವ್ ಚಿಗಟೇರಿ ಮಾತನಾಡಿ, ಡಾ. ಲೀಲಾದೇವಿ ಪ್ರಸಾದ್ ಅವರ ಸಾಮಾಜಿಕ ಕಳಕಳಿ, ಸಾಮಾಜಿಕ ಸೇವೆ, ಸಾಹಿತ್ಯ ಸಾಧನೆ ಅನುಪಮವಾದುದು ಎಂದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಬೇಲಿಮಠ ಸಂಸ್ಥಾನದ ಶ್ರೀ ಮ.ನಿ.ಪ್ರ ಶಿವರುದ್ರ ಮಹಾಸ್ವಾಮಿಗಳು ಮಾತನಾಡಿ, ಹಾಳು ಕೊಂಪೆಯಾಗಿದ್ದ ಉಡುತಡಿಯನ್ನು ರಾಷ್ಟ್ರೀಯ ಮಟ್ಟದ ಪುಣ್ಯಕ್ಷೇತ್ರವನ್ನಾಗಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು. ವೇದಿಕೆಯ ಮೇಲೆ ಡಾ. ಲೀಲಾದೇವಿ ಆರ್.ಪ್ರಸಾದ್, ಉಮಾದೇವಿ ಚಂದ್ರಶೇಖರ್, ಪ್ರಮಿಳಾ ಗರಡಿ, ಮಹಾಲಕ್ಷ್ಮಿ ಉಪಸ್ಥಿತರಿದ್ದರು.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಗೀತಾ ಜಯಂತ್ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಡಾ. ರಾಜೇಂದ್ರ ಎಸ್ ಗಡಾದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಲೇಖಕಿಯರಾದ ಡಾ. ಸರಸ್ವತಿ ಚಿಮ್ಮಲಗಿ, ಡಾ. ಹನುಮಾಕ್ಷಿ ಗೋಗಿ, ಡಾ. ನಿರ್ಮಲಾ ಎಲಿಗಾರ, ಮಂಜುಳಾ ಶಿವಾನಂದ, ಹಿರಿಯ ಸಮಾಜ ಸೇವಕಿ ಸುಶೀಲಮ್ಮ, ಕಮಲಾ ಸುದರ್ಶನ್, ದಿಬ್ಬೂರು ಗಿರೀಶ್ ಮುಂತಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಖ್ಯಾತ ಸಾಹಿತಿಗಳಾದ ಡಾ. ಧರಣಿದೇವಿ ಮಾಲಗತ್ತಿ ಮಾತನಾಡಿ, ನಾಡಿನ ಮಹಿಳೆಯರಿಗೆಲ್ಲ ಬಹುಮುಖ ಪ್ರತಿಭೆಯ ಡಾ. ಲೀಲಾದೇವಿ ಅವರು ಆದರ್ಶನೀಯವಾಗಿದ್ದಾರೆ ಎಂದರು. ಖ್ಯಾತ ಸಾಹಿತಿ ಡಾ. ಎಚ್.ಎಸ್. ಶಿವಪ್ರಕಾಶ್ ಸಮಾರೋಪ ನುಡಿಗಳನ್ನಾಡಿ, ಡಾ. ಲೀಲಾದೇವಿ ಅವರು ೯೩ರ ಇಳಿವಯದಲ್ಲೂ ಕ್ರಿಯಾಶೀಲರಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಸೋಜಿಗವಾಗಿದೆ ಎಂದರು.