ವಿಜಯಸಾಕ್ಷಿ ಸುದ್ದಿ, ಧಾರವಾಡ : ಇಲಕಲ್ಲ ಚಿತ್ತರಗಿ ಮಹಾಂತಮಠದ ಡಾ.ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಡಾ. ಮಹಾಂತ ಶಿವಯೋಗಿಗಳು ತೋರಿದ ದಾರಿಯಲ್ಲಿ ಪ್ರತಿಯೊಬ್ಬರೂ ಸಾಗಿದರೆ ಆರೋಗ್ಯಕ ಸಮಾಜ ಹೊಂದಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಇಲ್ಲಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸುಧಾರಣೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ದುಶ್ಚಟಗಳನ್ನು ಬಿಡುವುದರಿಂದ ದೈಹಿಕ ಆರೋಗ್ಯ ಸುಧಾರಣೆಯಾಗುತ್ತದೆ. ಜೊತೆಗೆ ಆರ್ಥಿಕವಾಗಿ ಸದೃಡರಾಗಲೂ ಸಾಧ್ಯವಿದೆ. ದುಶ್ಚಟಗಳಿಗೆ ದಾಸರಾಗಿ ನಿತ್ಯ ಕಣ್ಣೀರಿಡುವ ಕುಟುಂಬಗಳಿಗೆ ನೆಮ್ಮದಿ ಕಲ್ಪಿಸಿದ ಶ್ರೇಯಸ್ಸು ಮಹಾಂತ ಶಿವಯೋಗಿಗಳಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯವಾದದ್ದು ಶಿಸ್ತು, ಸಂಯಮ ಮತ್ತು ಪ್ರಾಮಾಣಿಕತೆ. ಈ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಬಹಳಷ್ಟು ವ್ಯಕ್ತಿಗಳು ವ್ಯಸನಗಳಿಂದ ತಾವಷ್ಟೇ ಹಾಳಾಗದೆ ಇಡೀ ಕುಟುಂಬವನ್ನೇ ನಾಶ ಮಾಡುತ್ತಾರೆ. ಬೆಂಕಿ ದೇಹ ಮಾತ್ರ ಸುಟ್ಟರೆ, ವ್ಯಸನ ದೇಹ ಮತ್ತು ಆತ್ಮ ಎರಡನ್ನೂ ಸುಡುತ್ತದೆ ಎಂದರು
ಡಾ. ಮಹಾಂತ ಶಿವಯೋಗಿಗಳ ಭಿಕ್ಷೆ ಬೇಡುವ ಸ್ವರೂಪ ಭಿನ್ನವಾಗಿತ್ತು. ಬಹುತೇಕ ಸ್ವಾಮಿಜಿಗಳು ಗುರು ದಕ್ಷಿಣೆ, ಕಾಣಿಕೆಯಾಗಿ ಹಣ, ಕಾಳು, ಊಟ, ಕಟ್ಟಡ, ಕಾರು, ಭೂಮಿ ಕೇಳಿದರೆ, ಮಹಾಂತ ಅಪ್ಪಗಳು ತಮ್ಮ ಜೋಳಿಗೆ ಚಾಚಿ ನಿಮ್ಮ ವ್ಯಸನ, ದುಶ್ಚಟಗಳನ್ನು ದಾನ ಮಾಡಿ ಎಂದು ಕೇಳುತ್ತಿದ್ದರು. ಅನೇಕರು ಶ್ರೀಗಳ ಜೋಳಿಗೆಗೆ ಸರಾಯಿ ಬಾಟಲ್, ಗುಟಕಾ ಚೀಟಿ, ಬೀಡಿ, ಸಿಗರೇಟು, ತಂಬಾಕು ಸೇರಿದಂತೆ ವಿವಿಧ ವಸ್ತುಗಳನ್ನು ಹಾಕಿ, ಭಕ್ತಿಯಿಂದ ಶ್ರೀಗಳಿಗೆ ನಮಿಸುತ್ತಿದ್ದರು. ಅನೇಕರು ತಮ್ಮ ಚಟಗಳನ್ನು ಬಿಟ್ಟು ಮಠದ ಭಕ್ತರಾಗಿದ್ದನ್ನು ನೋಡಿದ್ದೇವೆ ಎಂದು ಸಭಾಪತಿಗಳು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಮಾತನಾಡಿ, ಇಲಕಲ್ಲ ಮಹಾಂತ ಅಪ್ಪಗಳನ್ನು ಬಾಲ್ಯದಿಂದಲೇ ನೋಡಿದ್ದೇನೆ. ಅವರ ಕ್ರಾಂತಿಕಾರಿ ನಡೆ ಅಂದಿನ ಹಳ್ಳಿಗಳಲ್ಲಿ ಸಂಚಲನ ಮೂಡಿಸಿತ್ತು. ಹರಿಜನ, ಗಿರಿಜನ ಕೇರಿ, ಕೊಳಚೆ ಪ್ರದೇಶ, ಪಟ್ಟಣ, ಹಳ್ಳಿಗಳ ಬೇಧವಿಲ್ಲದೆ ಎಲ್ಲ ಕಡೆಗೂ ಮಹಾಂತ ಜೊಳಿಗೆಯೊಂದಿಗೆ ಸಂಚರಿಸಿ, ಜನರಲ್ಲಿ ವ್ಯಸನಗಳ ಬಗ್ಗೆ ಅರಿವು ಮೂಡಿಸುತ್ತಿದ್ದರು ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಅನೇಕ ಕಡೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ದುಶ್ಚಟಗಳಿಗೆ ಒಳಗಾಗಿದ್ದಾರೆ ಎಂಬ ಆರೋಪಗಳಿವೆ. ಆದ್ದರಿಂದ ಇಡೀ ಶೈಕ್ಷಣಿಕ ವಲಯವನ್ನು ವ್ಯಸನಮುಕ್ತಗೊಳಿಸಿ, ಶುದ್ಧೀಕರಿಸುವ ಅಗತ್ಯವಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಶಿಕ್ಷಕರಿಗೆ, ಮಕ್ಕಳಿಗೆ ಅರಿವು ಮೂಡಿಸುವ, ಜಾಗೃತಿ ಹೆಚ್ಚಿಸುವ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಡಿಮ್ಹಾನ್ಸ್ ಸಂಸ್ಥೆಯ ಟೆಲಿಮಾನಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ, ಮನೋವೈದ್ಯ ಡಾ. ಸುಧೀಂದ್ರ ಹುದ್ದಾರ ಉಪನ್ಯಾಸ ನೀಡಿದರು. ಧಾರವಾಡ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಅರುಣಕುಮಾರ ಸಿ ಅಧ್ಯಕ್ಷತೆಯನ್ನು, ಮನಗುಂಡಿ ಗುರುಮಹಾಮನೆಯ ಬಸವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ., ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ ವೇದಿಕೆಯಲ್ಲಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಾರ್ತಾ ಸಹಾಯಕ ಅಧಿಕಾರಿ ಡಾ.ಸುರೇಶ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಮಾನ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಮಂಜುನಾಥ ಭಜಂತ್ರಿ ಅತಿಥಿಗಳ ಪರಿಚಯಿಸಿದರು. ಅಧ್ಯಾಪಕ ಪ್ರಶಾಂತ ಪಾಟೀಲ ಕಾರ್ಯಕ್ರಮ ನಿರೂಪಿಸಿದರೆ, ಅಶೋಕ ಕೋರಿ ವಂದಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ ಮಾತನಾಡಿ, ಸಣ್ಣ ವಯಸ್ಸಿನ ಮಕ್ಕಳು ಗಾಂಜಾ, ಡ್ರಗ್ಸ್ನಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇವರಿಗೆ ಪಾಲಕರು ಇತರರು ಸರಿಯಾಗಿ ಗಮನಿಸದೇ ಇರುವುದು ಕಾರಣವಾಗಿದೆ. ಪಾಲಕರು ಮಕ್ಕಳ ಪಾಲನೆ ಬಗ್ಗೆ ಜವಾಬ್ದಾರಿಯಿಂದ ವರ್ತಿಸಬೇಕೆಂದು ಹೇಳಿದರು.