ನವದೆಹಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ಸಿಖ್ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸಿಂಗ್ ಅವರ ಪಾರ್ಥೀವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಮನಮೋಹನ್ ಸಿಂಗ್ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ಬಳಿಕ ಸಿಖ್ ಧರ್ಮದ ಧಾರ್ಮಿಕ ಕ್ರಮದಂತೆ ಶ್ಲೋಕಗಳನ್ನು ಪಠಣೆ ಮಾಡಿ, ಮಧ್ಯಾಹ್ನ 12.55 ಕ್ಕೆ ಸರಿಯಾಗಿ ಮನಮೋಹನ್ ಸಿಂಗ್ ಅವರ ಪಾರ್ಥೀವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.
ಅಂತ್ಯಕ್ರಿಯೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ರಿಂದ ಹಿಡಿದು ಪ್ರಮುಖ ಗಣ್ಯರು, ಕೈ ನಾಯಕರು, ವಿದೇಶಿ ರಾಜತಾಂತ್ರಿಕರು ಪಾಲ್ಗೊಂಡರು.
ಮೂರು ಸೇನಾಪಡೆಯಿಂದ ಗೌರವ ಸಮರ್ಪಣೆ ಮಾಡಲಾಯಿತು. ಕುಸಿಯುತ್ತಿದ್ದ ಭಾರತದ ಆರ್ಥಿಕತೆಯನ್ನು ಸರಿದಾರಿಗೆ ತಂದ ನವಭಾರತದ ಆರ್ಥಿಕತೆಯ ನಿರ್ಮಾತೃ, ದೇಶ ಕಂಡ ಶ್ರೇಷ್ಠ ಪ್ರಧಾನಿಯನ್ನು ದೇಶವು ತುಂಬಿದ ಕಣ್ಣುಗಳಿಂದ ಬೀಳ್ಕೊಟ್ಟಿತು.