ವಿಜಯಸಾಕ್ಷಿ ಸುದ್ದಿ, ಗದಗ: ಗದಗಿನ ಹಿರಿಯ ತಜ್ಞ ವೈದ್ಯರು, ಗದಗ ಐಎಂಎ ಹಿರಿಯ ಸದಸ್ಯರೂ ಆದ ಡಾ. ರಾಜಶೇಖರ ಬಳ್ಳಾರಿ ಅವರ ವೈದ್ಯಕೀಯ ಹಾಗೂ ಸಮಾಜಮುಖಿ ಕಾರ್ಯಗಳನ್ನು ಪ್ರಶಂಸಿಸಿ ಐ.ಎಂ.ಎ ಕೇಂದ್ರದ ರಾಷ್ಟ್ರೀಯ ಅಧ್ಯಕ್ಷ ಡಾ. ದಿಲೀಪ ಭಾನುಸಾಲಿ ಪ್ರಶಂಸನಾ ಪ್ರಶಸ್ತಿ ನೀಡಿದ್ದಾರೆ.
ಡಾ. ರಾಜಶೇಖರ ಬಳ್ಳಾರಿ ಅವರು ಕಳೆದ 45 ವರ್ಷಗಳಿಂದ ಐಎಂಎ ಆಜೀವ ಸದಸ್ಯರಾಗಿ, ಐಎಂಎ ಗದಗ ಜಿಲ್ಲಾ, ರಾಜ್ಯ ಘಟಕದ ಅಧ್ಯಕ್ಷರಾಗಿ, ಕಳೆದ 26 ವರ್ಷಗಳಿಂದ ನವದೆಹಲಿಯ ರಾಷ್ಟ್ರೀಯ ಐಎಂಎ ಕೇಂದ್ರ ಕಾರ್ಯಕಾರಿಣಿ ಸದಸ್ಯರಾಗಿ, ಕಳೆದ ನಾಲ್ಕು ವರ್ಷಗಳಿಂದ ಐಎಂಎ ಕೇಂದ್ರ ಹಣಕಾಸು ಸಮಿತಿಯ ಸದಸ್ಯ ಸೇರಿದಂತೆ ಅನೇಕ ಹುದ್ದೆಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ಕಳೆದ 40 ವರ್ಷಗಳಿಂದ ರೋಟರಿ ಕ್ಲಬ್‌ನ ಸದಸ್ಯರಾಗಿ, ಅಧ್ಯಕ್ಷರಾಗಿ ಜನಮುಖಿ, ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿರುವ ಡಾ. ಬಳ್ಳಾರಿ ಅವರು ಪತ್ರಿಕೆ, ನಿಯತಕಾಲಿಕೆಗಳಲ್ಲಿ ವೈದ್ಯಕೀಯ ಹಾಗೂ ವೈಚಾರಿಕ ಲೇಖನಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಅವಲೋಕಿಸಿ ಇತ್ತೀಚೆಗೆ ಅಲಹಾಬಾದ್‌ದಲ್ಲಿ ಜರುಗಿದ ಐಎಂಎ ರಾಷ್ಟ್ರೀಯ ಸಮ್ಮೇಳನದಲ್ಲಿ ಗೌರವದ ಈ ಪ್ರಶಂಸನಾ ಪತ್ರ ನೀಡಲಾಗಿದೆ.
ಡಾ. ರಾಜಶೇಖರ ಬಳ್ಳಾರಿ ಅವರಿಗೆ ರಾಜ್ಯ, ಜಿಲ್ಲಾ ಐಎಂಎ, ರೋಟರಿ ಸದಸ್ಯರು ಅಭಿನಂದಿಸಿದ್ದಾರೆ.



