ವಿಜಯಸಾಕ್ಷಿ ಸುದ್ದಿ, ಗದಗ: ನಮ್ಮ ಸಂಸ್ಕೃತಿ, ನಮ್ಮತನವನ್ನು ಬೆಳೆಸುವ ದಿಟ್ಟತನ ಹೊಂದಿದ್ದ ಡಾ. ರಾಜಕುಮಾರ ಅವರು ಕಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ವರನಟ ಡಾ. ರಾಜಕುಮಾರ್ ಅವರ 97ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುತ್ತುರಾಜ್ ರಾಜಕುಮಾರ ಆಗಿ ಬದಲಾಗಿದ್ದು ಒಂದು ರೋಚಕ. ರಾಜ್ ಎಂಬುದು ಸಂಸ್ಕೃತಿಯ ಪ್ರತೀಕ. ಅಂದಿನ ಕಾಲದಲ್ಲೇ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ಕೊಟ್ಟು ಅಭಿಮಾನಿಗಳ ಮನದಲ್ಲಿ ನೆಲೆಸಿದ್ದರು. ಅಭಿಮಾನಿಗಳೇ ದೇವರು ಎಂಬ ಪದವನ್ನು ಹುಟ್ಟುಹಾಕಿದವರೇ ಡಾ. ರಾಜಕುಮಾರ ಎಂದು ಹೇಳಿದರು.
ಡಾ. ರಾಜಕುಮಾರರ ಜನ್ಮದಿನವನ್ನು ಸರಕಾರದ ವತಿಯಿಂದ ಆಚರಿಸಲಾಗುತ್ತಿದೆ. ವರನಟ ಡಾ. ರಾಜಕುಮಾರ ಅವರ ಒಂದೊಂದು ಚಲನಚಿತ್ರಗಳು ಗುರಿ, ಧ್ಯೇಯ, ಉದ್ದೇಶ, ಸಾಮಾಜಿಕ ಪರಿವರ್ತನೆ ಹೀಗೆ ಸಮಾಜಕ್ಕೆ ಪೂರಕವಾಗುವ ಹಾಗೂ ಯುವಕರಿಗೆ ದಾರಿದೀಪವಾಗುವ ಸಂದೇಶಗಳನ್ನು ನೀಡುತ್ತಿದ್ದವು. ನಾಡು-ನುಡಿಗಾಗಿ ಅವರ ಸೇವೆ ಅಪಾರವಾಗಿದ್ದು, ಗೋಕಾಕ ಚಳವಳಿಗೆ ಡಾ. ರಾಜಕುಮಾರರು ಕಾಲಿಟ್ಟ ನಂತರ ಹೋರಾಟದ ದಿಕ್ಕೇ ಬದಲಾಯಿತು ಎಂದು ಅಭಿಮಾನದಿಂದ ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಡಾ. ರಾಜಕುಮಾರ ಅವರು ಒಬ್ಬ ವ್ಯಕ್ತಿಯಲ್ಲ, ಅವರೊಬ್ಬ ಶಕ್ತಿಯಾಗಿ, ಗಾಯಕರಾಗಿ ಕನ್ನಡದಲ್ಲಿ ಮೊಟ್ಟಮೊದಲ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದವರಲ್ಲಿ ಅಗ್ರಗಣ್ಯರು ಎಂದರು.
ಡಾ. ರಾಜಕುಮಾರ ಅವರು ನಟನೆಗೆ ಸೀಮಿತವಾಗದೇ ಯುವಜನಕ್ಕೆ ದಾರಿದೀಪವಾಗಿದ್ದರು. ಅವರ ಸಿನಿಮಾಗಳಲ್ಲಿ ಅಶ್ಲೀಲ ಭಾಷೆ ಇರುತ್ತಿರಲಿಲ್ಲ, ದುಶ್ಚಟದ ಪಾತ್ರ ನಿರ್ವಹಿಸುತ್ತಿರಲಿಲ್ಲ. ಗೋಕಾಕ ಚಳವಳಿಯ ಮುಂಚೂಣಿ ವಹಿಸಿ ಕನ್ನಡ ಭಾಷೆ, ನಾಡು-ನುಡಿಗಾಗಿ ಅಮೂಲ್ಯ ಸೇವೆ ಸಲ್ಲಿಸಿ ಕನ್ನಡಿಗರ ಮನದಲ್ಲಿ ಹಚ್ಚಹಸಿರಾಗಿ ಉಳಿದಿದ್ದಾರೆ ಎಂದು ಹೇಳಿದರು.
ಝೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರೋಣ ತಾಲೂಕಿನ ಹರೀಶ ಪತ್ತಾರ ಅವರು ವರನಟ ಡಾ. ರಾಜಕುಮಾರರ ಭಕ್ತ ಪ್ರಹ್ಲಾದ ಚಲನಚಿತ್ರದ ಹಿರಣ್ಯಕಶ್ಯಪು ಪಾತ್ರವನ್ನು ಪ್ರದರ್ಶಿಸಿದರು. ನಂತರ ಹುಬ್ಬಳ್ಳಿಯ ಚಲನಚಿತ್ರ ನಿರ್ದೇಶಕ ಹಾಗೂ ನಟ ದಿಲೀಪ್ ಶರ್ಮಾ, ಗಾಯಕ ಗೌಡಪ್ಪ ಬೊಮ್ಮಪ್ಪನವರ, ಕಲಾವಿದ ಹರೀಶ್ ಪತ್ತಾರ ಅವರನ್ನು ಸನ್ಮಾನಿಸಲಾಯಿತು. ಗೌಡಪ್ಪ ಬೊಮ್ಮಪ್ಪನವರ ಮತ್ತು ತಂಡದವರು ಡಾ. ರಾಜಕುಮಾರ್ ಚಿತ್ರಗೀತೆಗಳ ಗಾಯನ ಪ್ರಸ್ತುತಪಡಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಗದಗ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ವೀರಯ್ಯಸ್ವಾಮಿ ಬಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಮುಖಂಡರು ಹಾಜರಿದ್ದರು.
ಅಖಿಲ ಕರ್ನಾಟಕ ಡಾ. ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟ, ಡಾ. ಶಿವರಾಜಕುಮಾರ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ವಿಠಲ್ ಪಿ.ಪರಾಪೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಂಗಾಪೂರ, ಉಪಾಧ್ಯಕ್ಷರಾದ ನಾಗರಾಜ ಎನ್.ಗುತ್ತಿ, ಖಜಾಂಚಿ ವಿನಾಯಕ ಗಜಕೋಶ್, ಶಹರ ಅದ್ಯಕ್ಷ ಮಲ್ಲೇಶ ಪರಾಪೂರ, ಮಹಿಳಾ ಜಿಲ್ಲಾಧ್ಯಕ್ಷೆ ರೇಖಾ ಬಂಗಾರಶೆಟ್ಟರ, ಪ್ರಧಾನ ಕಾರ್ಯದರ್ಶಿ ಮೇಘನಾ ಎಮ್.ಕೊಟ್ಟೂರ ಸೇರಿದಂತೆ ಚಂದ್ರು ಚೌಹಾಣ, ಮಲ್ಲಿಕಾರ್ಜುನ ಖಂಡಮ್ಮನವರ ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ರಾಜ್ ಕುಮಾರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಹುಬ್ಬಳ್ಳಿಯ ಚಲನಚಿತ್ರ ನಿರ್ದೇಶಕ ಹಾಗೂ ನಟ ದಿಲೀಪ್ ಶರ್ಮಾ ಉಪನ್ಯಾಸ ನೀಡಿ, ವ್ಯಕ್ತಿ, ಶಕ್ತಿ ಜೊತೆಗೆ ಡಾ. ರಾಜಕುಮಾರ ಮಗುವಾಗಿ ಇರುತ್ತಿದ್ದರು. ಅಭಿಮಾನಿಗಳೇ ನನ್ನ ದೇವರು ಎಂದು ಮನಸಾರೆ ಹೇಳುತ್ತಿದ್ದರು. ನಾನು ಎಂಬುದನ್ನು ಮರೆತು ಬೇರೆ ನಟರ ನಟನೆಯನ್ನು ಹೊಗಳುತ್ತಿದ್ದರು. ಜಾತಿ, ಮತ, ಪಂಥ ಕೇಳದೇ ಎಲ್ಲರೊಂದಿಗೆ ಸಮಾನವಾಗಿ ಬೆರೆಯುವ ಡಾ. ರಾಜಕುಮಾರ ಅವರು ಸರಳವಾಗಿ ಬದುಕು ನಡೆಸುತ್ತಿದ್ದರು ಎಂದು ಹೇಳಿದರು.