ಡಾ. ರಾಜ್‌ಕುಮಾರ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ 25 ವರ್ಷಗಳ ಬಳಿಕ ಮಹತ್ವದ ಕಾನೂನು ಬೆಳವಣಿಗೆ ಸಂಭವಿಸಿದೆ. ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ ಕೆಳ ನ್ಯಾಯಾಲಯದ ಖುಲಾಸೆ ತೀರ್ಪನ್ನು ಎತ್ತಿಹಿಡಿದಿದೆ.
2000ರ ಜುಲೈ 30ರಂದು ದೊಡ್ಡಗಾಜನೂರಿನ ಫಾರ್ಮ್‌ಹೌಸ್‌ನಿಂದ ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. 108 ದಿನಗಳ ಕಾಲ ನಡೆದ ಈ ನಾಟಕೀಯ ಘಟನೆ ಕರ್ನಾಟಕ ಮತ್ತು ತಮಿಳುನಾಡಿನ ರಾಜಕೀಯ ಹಾಗೂ ಕಾನೂನು ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.
ಪ್ರಕರಣದಲ್ಲಿ 14 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಎನ್‌ಕೌಂಟರ್‌ನಲ್ಲಿ ವೀರಪ್ಪನ್ ಸೇರಿ ನಾಲ್ವರು ಸಾವನ್ನಪ್ಪಿದ ಬಳಿಕ, ಉಳಿದ ಒಂಬತ್ತು ಮಂದಿಯ ವಿರುದ್ಧ ದೀರ್ಘಾವಧಿ ವಿಚಾರಣೆ ನಡೆದಿತ್ತು. ಸುಮಾರು 10 ನ್ಯಾಯಮೂರ್ತಿಗಳು ಬದಲಾಗಿದ್ದ ಈ ಪ್ರಕರಣ 18 ವರ್ಷಗಳ ಬಳಿಕ 2018ರಲ್ಲಿ ಖುಲಾಸೆ ತೀರ್ಪಿನಿಂದ ಅಂತ್ಯಗೊಂಡಿತ್ತು.
ಆ ತೀರ್ಪಿಗೆ ವಿರೋಧವಾಗಿ 2019ರಲ್ಲಿ ಸಲ್ಲಿಸಿದ ಮೇಲ್ಮನವಿಯನ್ನು ಇದೀಗ ಹೈಕೋರ್ಟ್ ತಿರಸ್ಕರಿಸಿದೆ. ಇದರೊಂದಿಗೆ ಎರಡು ದಶಕಗಳಿಗೂ ಅಧಿಕ ಕಾಲ ಮುಂದುವರಿದ ಕಾನೂನು ಹೋರಾಟಕ್ಕೆ ಅಂತಿಮ ತೆರೆ ಬಿದ್ದಂತಾಗಿದೆ.



