ವಿಜಯಸಾಕ್ಷಿ ಸುದ್ದಿ, ಮುಳಗುಂದ: ತಮ್ಮ ವೃತ್ತಿಯ ಜೊತೆಯಲ್ಲಿ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಮಾಜ ಸೇವೆ, ವಚನ ಸಾಹಿತ್ಯ ಹಾಗೂ ಸಂಘ-ಸಂಸ್ಥೆಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿ, ಬಡವರ, ದೀನ-ದಲಿತರ ಸೇವೆ ಮಾಡುತ್ತಿರುವ ಡಾ. ಎಸ್.ಸಿ. ಚವಡಿ ನಿಸ್ವಾರ್ಥ ಸೇವಕರು ಎಂದು ಡಾ. ಎಸ್.ಬಿ. ಶೆಟ್ಟರ ಹೇಳಿದರು.
ಅವರು ಪಟ್ಟಣದ ಬಾಲಲೀಲಾ ಮಾಹಾಂತ ಶಿವಯೋಗಿ ಕಲಾಭವನದಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮುಳಗುಂದ ಹೋಬಳಿ ಘಟಕ ಸಹಯೋಗದಲ್ಲಿ ಲಿಂ. ಗಂಗಮ್ಮ, ಲಿಂ. ಚನ್ನಬಸಪ್ಪ ಚವಡಿ ಇವರ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಚವಡಿ ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡಿ.
ಆರ್.ಎಂ. ಕಲ್ಲನಗೌಡರ ಮಾತನಾಡಿ, ರೆ. ಚನ್ನಬಸಪ್ಪ ಉತ್ತಂಗಿಯವರು ಸರ್ವಜ್ಞನ ವಚನ ಸಾಹಿತ್ಯ, ಲಿಂಗಾಯತ ಪರಂಪರೆಯನ್ನು ಉಳಿಸಿ ಬೆಳೆಸಿದವರು. ಸಮಾಜಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ದಾರಿ ದೀಪವಾದವರು. ಡಾ.ಎಸ್.ಸಿ. ಚವಡಿ ಅವರು ತಂದೆ-ತಾಯಿಯವರ ಹೆಸರಿನಲ್ಲಿ 10 ಲಕ್ಷ ರೂ ದತ್ತಿ ಹಣ ಇಡುವ ಮೂಲಕ ಪ್ರತಿ ವರ್ಷ ಸಮಾಜದ ಸಾಧಕರನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದರು.
ಡಾ. ಎಸ್.ಸಿ. ಚವಡಿ ಅವರು ತಮ್ಮ ಸ್ವಂತ ಊರಿನ ಗ್ರಂಥಾಲಯಕ್ಕೆ ಒಂದು ಗುಂಟೆ ಜಾಗ, ದೇವಸ್ಥಾನ ಹಾಗೂ ತಾವು ಕಲಿತ ಶಾಲೆಗೆ ದತ್ತಿ ಹಣವನ್ನು ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಧಾರವಾಡ ಮುರುಘಾಮಠ ಹಾಗೂ ಮುಳಗುಂದ ಗವಿಮಠದ ಡಾ. ಮಲ್ಲಿಕಾರ್ಜುನ ಮಾಹಾಸ್ವಾಮೀಜಿ ವಹಿಸಿದ್ದರು. ಸಮ್ಮುಖವನ್ನು ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು, ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿವಣ್ಣಾ ನೀಲಗುಂದ, ಎಂ.ಡಿ. ಬಟ್ಟೂರ ಪಾಲ್ಗೊಂಡಿದ್ದರು. ಡಾ. ಆರ್.ಎಂ. ಕಲ್ಲನಗೌಡರ ರೆ. ಉತ್ತಂಗಿ ಚನ್ನಬಸಪ್ಪನವರ ಕುರಿತು ಉಪನ್ಯಾಸ ನೀಡಿದರು. ಡಾ. ಅಶೋಕ ಗೋಧಿ, ಡಾ. ಎಸ್.ಕೆ. ಜೋಶಿ ಅವರನ್ನು ಸನ್ಮಾನಿಸಲಾಯಿತು. ಪ್ರಸಾದ ಸುತಾರ ಸಂಗೀತ ಸೇವೆ ನೀಡಿದರು.