ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮೀಪದ ಹೂವಿನ ಶಿಗ್ಲಿ ಗ್ರಾಮದ ವಿರಕ್ತಮಠವು ಈ ಭಾಗದಲ್ಲಿಯೇ ಸಮನ್ವಯತೆಯನ್ನು ಸಾರುವ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತಿದ್ದು, ಇಂತಹ ಪವಿತ್ರ ಕ್ಷೇತ್ರವನ್ನಾಗಿ 만든 ಲಿಂ.ನಿರಂಜನ ಮಹಾಸ್ವಾಮಿಗಳು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಷ್ಟೇ ಅಲ್ಲ, ಆಯುರ್ವೇದ ಔಷಧಿ ನೀಡುವಲ್ಲಿ ಸಿದ್ಧಹಸ್ತರಾಗಿದ್ದರು. ಅವರು ಕಾಲವಾಗಿ 16 ವರ್ಷಗಳು ಗತಿಸಿದ್ದು, ಅವರ ಸ್ಮರಣಾರ್ಥವಾಗಿ ಶ್ರೀಮಠದಿಂದ ವೈದ್ಯ ನಿರಂಜನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಈ ಭಾಗದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞರಾಗಿ ವಿಶೇಷ ಸಾಧನೆ ಮಾಡಿ ಸಾವಿರಾರು ರೋಗಿಗಳ ಪಾಲಿನ ಧನ್ವಂತರಿಯಾಗಿ, ನಿಷ್ಠೆ, ಪ್ರಾಮಾಣಿಕತೆಯಿಂದ ಚಿಕಿತ್ಸೆ ನೀಡುತ್ತಿರುವ ಮತ್ತು ಅನೇಕ ಊರುಗಳಲ್ಲಿ ಉಚಿತವಾಗಿ ಪ್ರಾಕೃತಿಕ ಚಿಕಿತ್ಸಾ ಶಿಬಿರವನ್ನು ಯಶಸ್ವಿಯಾಗಿ ಮಾಡಿಕೊಂಡು ಬಂದಿರುವ ಹುಲಕೋಟಿಯ ಕೆ.ಎಚ್. ಪಾಟೀಲ ಪ್ರಕೃತಿ ಚಿಕಿತ್ಸಾ ಕೇಂದ್ರದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ತಜ್ಞ ಡಾ. ಸತೀಶ ಹೊಂಬಾಳಿ ಅವರಿಗೆ ಶ್ರೀಮಠದ ಪ್ರತಿಷ್ಠಿತ `ವೈದ್ಯ ನಿರಂಜನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಸತೀಶ ಹೊಂಬಾಳಿಯವರು, ಮಠಗಳು ಸಾಂಸ್ಕೃತಿಕ ಶ್ರದ್ಧಾ ಕೇಂದ್ರಗಳು. ಹೂವಿನಶಿಗ್ಲಿ ವಿರಕ್ತಮಠ ಲಿಂ.ನಿರಂಜನಾನಂದ ಮಹಾಸ್ವಾಮಿಗಳು ಈ ಭಾಗದ ಪ್ರಸಿದ್ಧ ಆಯುರ್ವೇದ ವೈದ್ಯರಾಗಿ ಸಾವಿರಾರು ಜನರಿಗೆ ದೊಡ್ಡ ದೊಡ್ಡ ರೋಗಗಳಿಗೆ ಔಷಧಿ ನೀಡಿ ಗುಣಮುಖರಾಗಿರುವದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಲ್ಲದೆ ರಾಜ್ಯದಲ್ಲಿ ಪ್ರಥಮವಾಗಿ ಪ್ರಕೃತಿ ಚಿಕಿತ್ಸಾ ಕೇಂದ್ರ ಪ್ರಾರಂಭವಾಗಿರುವದು ಶಿಗ್ಲಿ ಗ್ರಾಮದಲ್ಲಿಯೇ ಆಗಿದ್ದು, ಆ ಗ್ರಾಮದ ಬಸವಕುಮಾರ ಸ್ವಾಮಿಜೀಯವರು ಈ ಕೇಂದ್ರವನ್ನು ಸ್ಥಾಪಿಸಿರುವದರಿಂದ ಇದು ಹೆಚ್ಚು ಮಹತ್ವದ್ದಾಗಿದೆ.
ಶ್ರೀಮಠದ ಕರ್ತೃತ್ವ ಶಕ್ತಿಯಿಂದ ಇಲ್ಲಿನ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿರುವದನ್ನು ನೋಡಿ ಅಚ್ಚರಿಯಾಯಿತು. ಸಮಾಜದಲ್ಲಿನ ಜನರಿಗೆ ಉತ್ತಮ ಮಾರ್ಗದರ್ಶನದ ಜೊತೆಗೆ ಶಿಕ್ಷಣ, ಸಾಮಾಜಿಕ ಚಿಂತನೆಯಲ್ಲಿ ಮಠ-ಮಾನ್ಯಗಳ ಪಾತ್ರ ಹಿರಿದಾಗಿದ್ದು, ಇಂತಹ ಪವಿತ್ರ ಸ್ಥಾನದಲ್ಲಿ ಹಿರಿಯ ಶ್ರೀಗಳ ಹೆಸರಿನಲ್ಲಿ ವೈದ್ಯ ನಿರಂಜನ ಪ್ರಶಸ್ತಿ ನೀಡಿರುವದು ನನ್ನ ಜವಾಬ್ದಾರಿ ಹೆಚ್ಚುವಂತಾಗಿದೆ ಎಂದು ಹೇಳಿದರು.
ಮುಂಡರಗಿ ಜಗದ್ಗುರುಗಳು, ಹೂವಿನಶಿಗ್ಲಿ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು, ಮುಖಂಡರು ಉಪಸ್ಥಿತರಿದ್ದರು.



