ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಅ. 9ರಂದು ನಡೆಯುವ ಲಿಂ.ಜ. ವೀರಗಂಗಾಧರ ಮಹಾಸ್ವಾಮಿಗಳ 43ನೇ ಪುಣ್ಯಾರಾಧನೆ ನಿಮಿತ್ತ `ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಪ್ರಶಸ್ತಿ’ಯನ್ನು ಈ ಬಾರಿ ಡಾವಣಗೇರೆಯ ಮಾಜಿ ಸಚಿವ, ಹಾಲಿ ಶಾಸಕ, ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪನವರಿಗೆ ಪ್ರದಾನ ಮಾಡಲಾಗುವದು ಎಂದು ಶಿವಾಚಾರ್ಯ ರತ್ನ ಶ್ರೀ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.
ಅವರು ಡಾವಣಗೇರೆ ನಗರದಲ್ಲಿ ಡಾ. ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ತೆರಳಿ ಪ್ರಥಮ ಬಾರಿಗೆ ನೀಡಲಾಗುತ್ತಿರುವ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿ ಪ್ರಶಸ್ತಿ ಸ್ವೀಕರಿಸಲು ಅಧಿಕೃತವಾಗಿ ಆಹ್ವಾನ ನೀಡಿದರು. ಶಾಮನೂರು ಶಿವಶಂಕರಪ್ಪನವರು ವೀರಶೈವ ಸಮಾಜದ ದೊಡ್ಡ ಆಸ್ತಿಯಾಗಿದ್ದು, ಸಮಾಜದ ಸಂಘಟನೆಗೆ ವಿಶೇಷ ಕಾರ್ಯ ಮಾಡಿರುವ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ರಂಭಾಪುರಿ ಜ.ಡಾ. ಪ್ರಸನ್ನ ರೇಣುಕ ವೀರಸೋಮೇಶ್ವರ ಭಗವತ್ಪಾದಂಗಳ ದಿವ್ಯ ಸಾನ್ನಿಧ್ಯದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದು ಹೇಳಿದರು.
ಈ ವೇಳೆ ಗಣಿ, ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಪ್ರಭಾವತಿ ಮಲ್ಲಿಕಾರ್ಜುನ ಮತ್ತಿತರರು ಹಾಜರಿದ್ದರು.