ವಿಜಯಸಾಕ್ಷಿ ಸುದ್ದಿ, ಗದಗ: ನಾಟಕವೆಂದರೆ ಭಾವನೆಗಳು, ಸಂಭಾಷಣೆ ಮತ್ತು ಕ್ರಿಯೆಗಳ ಮೂಲಕ ಮಾನವ ಅನುಭವಗಳ ಚಿತ್ರಣವನ್ನು ಒಳಗೊಂಡಿರುವ ಪ್ರದರ್ಶನ. ಸಮಾಜವನ್ನು ತಿದ್ದುವಲ್ಲಿ ನಾಟಕಗಳ ಪಾತ್ರ ಮಹತ್ವದ್ದಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ 2746ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಕಲಾವಿದರು ಆಯಾ ಪಾತ್ರಗಳಿಗೆ ಜೀವ ತುಂಬಿ, ಸಮಾಜಕ್ಕೆ ಸಂದೇಶ ನೀಡುವ ಕೆಲಸವನ್ನು ಮಾಡುತ್ತಾರೆ. ಕಲಾವಿದ ಪ್ರೇಕ್ಷಕರ ಹೃದಯವನ್ನು ಅಲ್ಲೋಲ ಕಲ್ಲೋಲ ಮಾಡಿದಾಗ ಉತ್ತಮ ನಟನಾಗುತ್ತಾನೆ. ಪ್ರೇಕ್ಷಕ ಒಳ್ಳೆಯದನ್ನು ಆಯ್ದುಕೊಂಡು ಕೆಟ್ಟದನ್ನು ಬಿಡಲು ಹಾಗೂ ಮನರಂಜನೆಯನ್ನು ಪಡೆಯಲು, ಸುಧಾರಣೆ ಹೊಂದಲು ನಾಟಕಗಳು ಪ್ರಯೋಜನಕಾರಿಯಾಗಿವೆ ಎಂದರು.
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ ವಿರಚಿತ `ಮೋಳಿಗೆ ಮಾರಯ್ಯ’ ನಾಟಕವನ್ನು ಧಾತ್ರಿ ರಂಗ ಸಂಸ್ಥೆ ಸಿರಿಗೇರಿಯವರು ಪ್ರದರ್ಶಿಸಿದರು.
ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಐಶ್ವರ್ಯ ವಿ.ಕವಿಶೆಟ್ಟಿ ಹಾಗೂ ವಚನ ಚಿಂತನವನ್ನು ಅಮೃತಾ ವಿ. ಕವಿಶೆಟ್ಟಿ ನೆರವೇರಿಸಿದರು. ದಾಸೋಹ ಸೇವೆಯನ್ನು ಈಶಣ್ಣ ಮುನವಳ್ಳಿ ಹಾಗೂ ಸಹೋದರರು ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರ್ಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಡಿ.ಜಿ.ಎಂ. ಆಯುರ್ವೇದ ಮೆಡಿಕಲ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ಉಪನ್ಯಾಸ ನೀಡಿ, ಪೌರಾಣಿಕ ಕತೆ, ಕಾದಂಬರಿ ಆಧಾರಿತ, ಭಕ್ತಿ ಪ್ರಧಾನ ನಾಟಕಗಳು, ಸಮಾಜವನ್ನು ಸುಧಾರಣೆ ಮಾಡಲು ಮೂಡಿಬಂದವು. ನಾಟಕಗಳು ಸಾವಿರಾರು ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿವೆ. ನಾಟಕದಲ್ಲಿ ನಟರು ಪಾತ್ರಗಳಿಗೆ ಜೀವ ತುಂಬುತ್ತಾರೆ. ಪ್ರೇಕ್ಷಕರು ಖುಷಿಪಡುತ್ತಾರೆ. ನಾಟಕಗಳು ಹೆಚ್ಚು ಹೆಚ್ಚು ಮನಸ್ಸಿನಲ್ಲಿ ಉಳಿಯುತ್ತವೆ ಎಂದರು.