ವಿಜಯಸಾಕ್ಷಿ ಸುದ್ದಿ, ಗದಗ : ಬಸವತತ್ವ ಪ್ರಸಾರಕ್ಕೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದ ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳು ನಡೆ-ನುಡಿಗಳಲ್ಲಿ ಒಂದಾಗಿದ್ದರು. ಧರ್ಮಗುರು ಎಂಬ ಸ್ಥಾನಕ್ಕೆ ಅಥವಾ ಸ್ವಾಮಿತ್ವಕ್ಕೆ ಘನತೆ ತಂದುಕೊಟ್ಟ ಅವರು ಶ್ರೇಷ್ಠ ಸಂತರಾಗಿದ್ದರು ಎಂದು ನಾಡೋಜ ಡಾ. ಗೊ.ರು. ಚನ್ನಬಸಪ್ಪ ನುಡಿದರು.
ಅವರು ಸೋಮವಾರ ನಗರದ ತೋಂಟದಾರ್ಯ ಮಠದಲ್ಲಿ ಜರುಗಿದ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 6ನೇ ಪುಣ್ಯಸ್ಮರಣೆ ನಿಮಿತ್ತ 5 ಲಕ್ಷ ರೂ ಮೊತ್ತದ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಸನ್ಮಾನೋತ್ತರವಾಗಿ ಮಾತನಾಡುತ್ತಿದ್ದರು.
ಡಾ.ತೋಂಟದ ಸಿದ್ಧಲಿಂಗ ಶ್ರೀಗಳ ಮೇಲೆ ನನಗೆ ಇದ್ದ ಅಪಾರ ಗೌರವ ಹಾಗೂ ಭಕ್ತಿಯ ಕಾರಣವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಕೊಂಡೆ. ಸದ್ಭಕ್ತಿ-ಸದಾಚಾರ-ಸದ್ವಿನಯದ ಸಾಕಾರಮೂರ್ತಿಗಳಾಗಿದ್ದ ಪೂಜ್ಯರು, ಶ್ರಮಿಕರ-ದೀನ ದಲಿತರ ತಲ್ಲಣಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದರು. ಅಂತಹ ಮಹಾಚೇತನದ ಸಂಪರ್ಕ ನನಗೆ ಇತ್ತು ಎಂಬುದೇ ಪುಣ್ಯವಿಶೇಷವಾಗಿದ್ದು, ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳಿಗೆ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ನಾನು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವನಾಗಿದ್ದಾಗ ಜಾನಪದ ವಿಶ್ವವಿದ್ಯಾಲಯದ ಮೂಲಕ ಕರ್ನಾಟಕದ ಎಲ್ಲಾ ಗ್ರಾಮಗಳ ಇತಿಹಾಸವುಳ್ಳ `ಗ್ರಾಮ ಚರಿತೆ’ ಗ್ರಂಥಗಳನ್ನು ಪ್ರಕಟಿಸಬೇಕೆಂದು ಗೊ.ರು. ಚನ್ನಬಸಪ್ಪನವರು ನನಗೆ ಸಲಹೆ ನೀಡಿದ್ದರು. ಆ ಪ್ರಕಾರ ಅಂದು ನಮ್ಮ ಸರ್ಕಾರ 10 ಕೋಟಿ ರೂಪಾಯಿ ಬಿಡುಗಡೆ ಮಾಡಿ ಗ್ರಾಮಚರಿತೆ ಗ್ರಂಥಗಳನ್ನು ಪ್ರಕಟಿಸಿತು. ಸಾಮಾಜಿಕ ಚಿಂತನೆಯುಳ್ಳವರಾಗಿದ್ದ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ರಾಷ್ಟ್ರೀಯ ಪ್ರಶಸ್ತಿಗೆ ಗೊ.ರು ಚನ್ನಬಸಪ್ಪ ಸೂಕ್ತ ಆಯ್ಕೆಯಾಗಿದ್ದು, ಅವರಿಂದ ಪ್ರಶಸ್ತಿಯ ತೂಕ ಇನ್ನಷ್ಟು ಹೆಚ್ಚಾಗಿದೆ ಎಂದರು.
ವಿ.ಪ ಸದಸ್ಯ ಎಸ್.ವಿ ಸಂಕನೂರ ಮಾತನಾಡಿ, ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಭೌತಿಕವಾಗಿ ನಮ್ಮನ್ನು ಅಗಲಿದರೂ ಅವರ ಶ್ರೇಷ್ಠ ಸಂದೇಶಗಳು ಹಾಗೂ ಸತ್ಕಾರ್ಯಗಳ ಮೂಲಕ ಅಜರಾಮರವಾಗಿದ್ದಾರೆ.
ಗಂಧದ ಕೊರಡಿನಂತೆ, ದೀಪದ ಬೆಳಕಿನಂತೆ ಜನಕಲ್ಯಾಣಕ್ಕಾಗಿ ಶ್ರಮಿಸಿದ್ದ ಶ್ರೀಗಳು ಬಸವತತ್ವವನ್ನು ಜನರಿಗೆ ತಲುಪಿಸಲು ಅವಿರತ ಶ್ರಮ ವಹಿಸಿದರು. ಪುಸ್ತಕ ಪ್ರಕಟಣೆ, ನಿರಂತರ ಶಿವಾನುಭವ ಕಾರ್ಯಕ್ರಮಗಳು, ಕಪ್ಪತಗುಡ್ಡ ರಕ್ಷಣೆ ಹೀಗೆ ಶ್ರೀಗಳ ಸಾಧನೆಯ ಮಜಲುಗಳು ಹಲವಾರಿದ್ದು, ಅವರ ಅಗಲಿಕೆ ನಂತರ ತೋಂಟದಾರ್ಯ ವಿದ್ಯಾಪೀಠದ ಕೆಲವು ನೌಕರರು ಹಾಗೂ ಪತ್ತಿನ ಸಂಘದ ಆದಾಯದಲ್ಲಿ ಸಿದ್ಧಲಿಂಗ ಶ್ರೀಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಕಪ್ಪತಗುಡ್ಡ ಹೋರಾಟವನ್ನು ಕೈಗೆತ್ತಿಕೊಳ್ಳದಿದ್ದರೆ ಇಂದು ಕಪ್ಪತಗುಡ್ಡ ಉಳಿದು ಏಷ್ಯಾ ಖಂಡದಲ್ಲೇ ಶುದ್ಧ ಗಾಳಿ ನೀಡುವ ತಾಣವಾಗುತ್ತಿರಲಿಲ್ಲ. ಶ್ರೀಗಳು ನಾನು ಶಾಸಕನಾಗಿದ್ದಾಗ ಕೈಗೊಂಡ ಅನೇಕ ಕೆಲಸಗಳನ್ನು ವಿಶೇಷವಾಗಿ ಪರಿಸರಕ್ಕೆ ಸಂಬಂಧಪಟ್ಟ, ಕೆರೆ ತುಂಬಿಸುವ ಕಾರ್ಯಗಳನ್ನು ಶ್ಲಾಘಿಸುತ್ತಿದ್ದರು. ಪೂಜ್ಯರು ಹಾಡುತ್ತಿದ್ದ ಜಾನಪದ ಗೀತೆಗಳನ್ನು ನನಗೆ ಈ ವೇದಿಕೆಯಲ್ಲಿ ಹಾಡಲು ಸಂತಸ ಎನಿಸುತ್ತದೆ ಎಂದು ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾದ ಬಿ.ಡಿ. ಕುಂಬಾರ ಮಾತನಾಡಿ, ಲಿಂ.ಸಿದ್ಧಲಿಂಗ ಶ್ರೀಗಳು ನಾನು ಹುಟ್ಟಿದ ವಿಜಯಪುರ ಜಿಲ್ಲೆಯವರು ಎಂಬುದು ನನಗೆ ಅಭಿಮಾನ ಎನಿಸುತ್ತದೆ.
ಗದಗ ಪೀಠಕ್ಕೆ ಅವರು ಪಾದಾರ್ಪಣೆ ಮಾಡುವಾಗ ನಾನು ಈ ಮಠದ ಶ್ರೀಮಂತಿಕೆಯ ಬದಲಿಗೆ ಭಕ್ತರ ಹೃದಯ ಶ್ರೀಮಂತಿಕೆ ನೋಡಿ ಈ ಮಠಕ್ಕೆ ಬಂದಿದ್ದೇನೆ ಎಂದು ಹೇಳಿದ್ದರು. ಗೋಕಾಕ್ ವರದಿ ಜಾರಿಗಾಗಿ ನಡೆದ ಹೋರಾಟಕ್ಕೆ ಮುನ್ನುಡಿ ಬರೆದಿದ್ದ ಶ್ರೀಗಳು ನಾಡು-ನುಡಿಗಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದರು.
ಮರೇಗುದ್ದಿ ಅಡವಿಸಿದ್ಧೇಶ್ವರಮಠದ ಪೂಜ್ಯ ಡಾ.ನಿರುಪಾಧೀಶ್ವರ ಮಹಾಸ್ವಾಮಿಗಳನ್ನು ಸಂಮಾನಿಸಲಾಯಿತು.
ಆಳಂದದ ಕೋರಣೇಶ್ವರ ಮಹಾಸ್ವಾಮಿಗಳು, ಭೈರನಟ್ಟಿಯ ಶಾಂತಲಿಂಗ ಮಹಾಸ್ವಾಮಿಗಳು, ಸಂಡೂರಿನ ಪ್ರಭು ಮಹಾಸ್ವಾಮಿಗಳು, ಅರಸಿಕೇರಿ ಮಠದ ಶಾಂತಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು. ಸಾನ್ನಿಧ್ಯ ವಹಿಸಿದ್ದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಪ್ರೊ.ಶಿವಾನಂದ ಪಟ್ಟಣಶೆಟ್ಟಿ ಅವರು ರಚಿಸಿದ `ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ದುಬೈ ಭೇಟಿಯ ನೆನಪುಗಳು’ ಹಾಗೂ ಡಾ. ಲಕ್ಷ್ಮಣ ಕೌಂಠೆ ರಚಿಸಿದ `ಶ್ರೀ ಚನ್ನಬಸವ ಸ್ವಾಮಿಗಳು’ ಗ್ರಂಥಗಳು ಲೋಕಾರ್ಪಣೆಗೊಂಡವು. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಶಾಸಕರಾದ ಜಿ.ಎಸ್. ಪಾಟೀಲ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡರ, ಕೆ.ಎಚ್. ಬೇಲೂರ, ಅಮರೇಶ ಅಂಗಡಿ, ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ ಮುಂತಾದವರಿದ್ದರು. ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನೇಕ ಸದ್ಭಕ್ತರು-ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶಾಸಕರಾದ ಡಾ. ಚಂದ್ರು ಲಮಾಣಿ ಮಾತನಾಡಿ, ಪೂಜ್ಯರು ನಾನು ಕಲಿತ ದಿಂಡೂರ ಶಾಲೆಗೆ ಆ ಕಾಲದಲ್ಲಿ ಒಂದು ಲಕ್ಷ ರೂಪಾಯಿಯಷ್ಟು ಹಣ ಖರ್ಚು ಮಾಡಿ ಆ ಶಾಲೆಯನ್ನು ಅಭಿವೃದ್ಧಿಪಡಿಸಿದರು. ಅವರ ಡಂಬಳ ಶಾಲೆಯಲ್ಲಿ ನಾನು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಬಂದಾಗ ನಮ್ಮ ತಾಂಡಾದ ವಿದ್ಯಾರ್ಥಿಗಳಿಗೆ ಅಂತಃಕರಣದಿಂದ ತಾಯಿಯಂತೆ ಉಣಬಡಿಸುತ್ತಿದ್ದರು. ಅವರು ನಮ್ಮ ಜನಾಂಗದ ಬಗ್ಗೆ ಹೊಂದಿದ್ದ ಪ್ರೀತಿ ಸದಾ ಸ್ಮರಣೀಯ ಎಂದರು.
ಗೊ.ರು. ಚನ್ನಬಸಪ್ಪ ಅವರ ಬಸವತತ್ವ ಪ್ರಸಾರ ಹಾಗೂ ಕನ್ನಡದ ಕೈಂಕರ್ಯಗಳನ್ನು ಸಮೀಪದಿಂದ ನೋಡಿರುವ ನನಗೆ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಹೆಸರಿನ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲು ಹೆಮ್ಮೆ ಎನಿಸುತ್ತದೆ. ಶರಣ ಸಾಹಿತ್ಯವನ್ನು ಮನೆಮನೆಗೆ ಹಾಗೂ ಮನಮನಕ್ಕೆ ತಲುಪಿಸಲು ಅಪಾರ ಶ್ರಮ ವಹಿಸಿರುವ ಗೊ.ರು. ಚನ್ನಬಸಪ್ಪನವರು ಈ ಹಿಂದೆ ನಮ್ಮ ಕೋರಿಕೆಯ ಮೇರೆಗೆ ಭಾಷಾ ಆಯೋಗದ ಮುಖ್ಯಸ್ಥರಾಗಿ ಕೇಂದ್ರದ ಕಾನೂನುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವಲ್ಲಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ.
– ಎಚ್.ಕೆ. ಪಾಟೀಲ.
ಕಾನೂನು, ಪ್ರವಾಸೋದ್ಯಮ ಸಚಿವರು.