ಶಾಲೆಯ ಆವರಣದಲ್ಲಿ ಅವಾಂತರ ಸೃಷ್ಟಿಸಿದ ಮಳೆ

0
Drainage water flowed on the road due to the rain
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ವಾಯುಭಾರ ಕುಸಿತದ ಪ್ರಭಾವದಿಂದ ಕಳೆದ 3-4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಪಟ್ಟಣ ಸೇರಿ ತಾಲೂಕಿನಾದ್ಯಂತ ಸಾಕಷ್ಟು ಸಮಸ್ಯೆ ಎದುರಾಗಿದೆ. ಬಾಲೇಹೊಸೂರು ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಅರ್ಭಟಕ್ಕೆ ಚರಂಡಿ ನೀರು ರಸ್ತೆಯಲ್ಲಿ ತುಂಬಿಕೊಂಡಿದ್ದು, ಶಾಲೆಯ ಆವರಣಕ್ಕೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ಮಕ್ಕಳಿಗೆ ಸಮಸ್ಯೆ ಉಂಟಾಗಿದೆ.

Advertisement

ಬಾಲೇಹೊಸೂರು ಗ್ರಾಮದಲ್ಲಿ ಮೂರು ದಿನಗಳಿಂದ ಜೋರಾದ ಮಳೆ ಸುರಿದಿದ್ದು, ಜಮೀನಿಗಳಲ್ಲಿ ನೀರು ನಿಂತು ಮುಂಗಾರು ಕೃಷಿ ಚಟುವಟಿಕೆಗಳಿಗೆ ಅವಕಾಶ ದೊರೆಯದಂತಾಗಿದೆ. ಅನೇಕ ಕಡೆಗಳಲ್ಲಿ ರೈತರು ಸಂಗ್ರಹಿಸಿರುವ ಮೇವು ಹಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಗುರುವಾರ ಸಂಜೆಯ ಮಳೆಯ ಅರ್ಭಟದಿಂದ ಗ್ರಾಮದ ಬಹುತೇಕ ರಸ್ತೆಗಳು ನೀರಿನಿಂದ ಆವೃತ್ತವಾಗಿದ್ದವು. ಚರಂಡಿಗಳು ತುಂಬಿಕೊಂಡು ನೀರು ಗ್ರಾಮದ ಶ್ರೀ ಗುರು ದಿಂಗಾಲೇಶ್ವರ ಸರಕಾರಿ ಪ್ರಾಥಮಿಕ ಶಾಲೆಯ ಆವರಣಕ್ಕೆ ನುಗ್ಗಿ ಆವರಣವು ಕೆರೆ ರೂಪವನ್ನು ತಾಳಿತ್ತು. ನೀರು ಶಾಲಾ ಆವರಣಕ್ಕೆ ನುಗ್ಗುವ ಕುರಿತು ಕಳೆದ ಎರಡು ಮೂರು ವರ್ಷಗಳಿಂದ ಗ್ರಾ.ಪಂಗೆ ತಿಳಿಸಿದ್ದರೂ ಅದರ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಭಾವನೆ ತಾಳಿದ್ದಾರೆ.

Drainage water flowed on the road due to the rain

 

ಸಂಬಂಧಪಟ್ಟವರು ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಆಗ್ರಹಿಸಿದ್ದಾರೆ.

ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೃಷಿ ಚಟುವಟಿಕೆ ಸ್ಥಗಿತಗೊಂಡಿವೆ. ಕೆಲವು ಕಡೆಗಳಲ್ಲಿ ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿವೆ. ಪಟ್ಟಣ ಸೇರಿದಂತೆ ಸುತ್ತಲಿನ ಶಿಗ್ಲಿ, ಬಾಲೆಹೊಸೂರ, ಯಳವತ್ತಿ, ಸೂರಣಗಿ, ಅಡರಕಟ್ಟಿ, ಪು.ಬಡ್ನಿ, ಬಟ್ಟೂರು, ರಾಮಗೇರಿ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಸೇತುವೆ ಮೇಲೆ ನೀರು ರಭಸದಿಂದ ಹರಿಯುತ್ತಿದ್ದು, ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪು.ಬಡ್ನಿ ಗ್ರಾಮದಲ್ಲಿ ಮಳೆಯಿಂದಾದ ಅನಾಹುತವನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಕೊಳಚೆ ಪ್ರದೇಶಗಳಾಗಿ ಮಾರ್ಪಟ್ಟಿವೆ. ರಸ್ತೆಗಳು ತಗ್ಗುಗುಂಡಿಗಳು ಬಿದ್ದು ನೀರು ಕೆಸರಿನಿಂದ ಕೂಡಿವೆ. ಬಿತ್ತನೆಗೆ ಹೊಲಗಳಿಗೆ ತೆರಳಿದ್ದ ಟ್ರ್ಯಾಕ್ಟರ್, ಎತ್ತಿನ ಗಳೆ ಮನೆಗೆ ಮರಳಿ ಬರುತ್ತಿವೆ. ಶುಕ್ರವಾರ ಮುಂಜಾನೆ ಮೋಡ ಮುಸುಕಿದ ವಾತಾವರಣವಿದ್ದಾಗ ರೈತರು ಬಿತ್ತನೆ ಕಾರ್ಯವನ್ನು ಮುಗಿಸುವ ಯೋಚನೆಯಲ್ಲಿದ್ದರೂ, ಮದ್ಯಾಹ್ನದ ವೇಳೆಗೆ ಸುರಿದ ಮಳೆಯಿಂದ ಬಿತ್ತನೆ ಕಾರ್ಯ ಸ್ಥಗಿತಗೊಂಡಿದೆ.

ಬಾಲೇಹೊಸೂರು ಗ್ರಾಮದಲ್ಲಿ ನೀರು ಹರಿಯುವ ರಾಜ ಕಾಲುವೆ ನಿರ್ಮಾಣ ಮಾಡಲು ಅನುದಾನ ಮಂಜೂರಾಗಿದ್ದರೂ ಕಾಮಗಾರಿ ನಿಂತಿದೆ. ರಾಜಕಾಲುವೆ ನಿರ್ಮಾಣವಾದರೆ ನೀರು ಸರಿಯಾದ ರೀತಿಯಲ್ಲಿ ಹರಿದು ಹೋಗುವಂತಾಗುತ್ತದೆ. ರಾಜಕಾಲುವೆ ನಿರ್ಮಾಣಕ್ಕೆ ಉಂಟಾಗಿರುವ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ದಿಟ್ಟ ನಿರ್ಧಾರ ತೆಗೆದುಕೊಂಡು ಮಳೆಗಾಲದಲ್ಲಿ ಗ್ರಾಮಸ್ಥರು ಅನುಭವಿಸುವ ತೊಂದರೆಯನ್ನು ತಪ್ಪಿಸಬೇಕೆಂದು ಗ್ರಾ.ಪಂ ಮಾಜಿ ಸದಸ್ಯ ಫಕ್ಕೀರೇಶ ಮ್ಯಾಟಣ್ಣವರ ಆಗ್ರಹಿದದ್ದಾರೆ.

 


Spread the love

LEAVE A REPLY

Please enter your comment!
Please enter your name here