ತಿಹಾರ್ ಜೈಲಿನಲ್ಲಿ ಬಂಧನದಲ್ಲಿರುವ ಮಹಾ ವಂಚಕ ಸುಖೇಶ್ ಚಂದ್ರಶೇಖರ್, ತನ್ನ ಮೋಸದ ಕಥೆಗೆ ಮತ್ತೆ ಹೊಸ ಅಧ್ಯಾಯ ಸೇರಿಸಿದ್ದಾನೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ಬೆವರ್ಲಿ ಹಿಲ್ಸ್ನಲ್ಲಿ ದುಬಾರಿ ಮನೆ ನೀಡಿದ್ದೇನೆ ಎಂಬ ದಾವೆಯೊಂದಿಗೆ ಜೈಲಿನಿಂದಲೇ ಪ್ರೇಮಪತ್ರ ಬರೆದಿದ್ದಾನೆ.
ಈ ಪತ್ರದಲ್ಲಿ ಸುಖೇಶ್, “ನೀನು ಸಾಧ್ಯವಿಲ್ಲ ಎಂದುಕೊಂಡಿದ್ದ ಅದೇ ಪ್ರಾಪರ್ಟಿ ಈಗ ಪೂರ್ಣಗೊಂಡಿದೆ. ಇದು ನಮ್ಮ ಮನೆ. ಈ ಕ್ರಿಸ್ಮಸ್ಗೆ ನಿನಗಾಗಿ ಉಡುಗೊರೆ” ಎಂದು ಬರೆದಿದ್ದಾನೆ. ಅಲ್ಲದೆ, “ನಮ್ಮ ಹೊಸ ಮನೆಯ ಸುತ್ತ ವಿಶಾಲ ಗಾಲ್ಫ್ ಕೋರ್ಸ್ ಇದೆ” ಎಂದು ವಿವರಿಸಿದ್ದಾನೆ. ಇದಕ್ಕೆ ಜೊತೆಗೆ, ಜಾಕ್ವೆಲಿನ್ ಐಪಿಎಲ್ ತಂಡದ ಮಾಲಕಿ ಆಗಬೇಕು ಎಂಬ ಆಸೆಯನ್ನು ನೆರವೇರಿಸುವುದಾಗಿ ಹೇಳಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಆದರೆ ವಾಸ್ತವವೇನೆಂದರೆ, ಸುಖೇಶ್ನ ಎಲ್ಲಾ ಆಸ್ತಿ-ಪಾಸ್ತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೈಲಿನಲ್ಲೇ ಕುಳಿತುಕೊಂಡು ವಿಐಪಿಗಳು, ರಾಜಕಾರಣಿಗಳು, ಉದ್ಯಮಿಗಳು ಮತ್ತು ನಟಿಯರನ್ನು ವಂಚಿಸಿ ನೂರಾರು ಕೋಟಿ ರೂಪಾಯಿ ಹಣ ಗಳಿಸಿದ್ದ ಈತನ ಹಿನ್ನೆಲೆ, ಅವನ ಹೇಳಿಕೆಗಳ ಮೇಲೆ ಗಂಭೀರ ಅನುಮಾನ ಮೂಡಿಸಿದೆ.
ಜಾಕ್ವೆಲಿನ್ ಫರ್ನಾಂಡೀಸ್ ಸೇರಿದಂತೆ ಹಲವು ಬಾಲಿವುಡ್ ನಟಿಯರಿಗೆ ದುಬಾರಿ ಕಾರು, ಮನೆ, ಉಡುಗೊರೆ ನೀಡಿದ್ದ ಪ್ರಕರಣಗಳ ತನಿಖೆ ಈಗಾಗಲೇ ನಡೆಯುತ್ತಿದ್ದು, ಜಾಕ್ವೆಲಿನ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಸುಖೇಶ್ನ ಪತ್ರ ಪ್ರೇಮವೇ ಅಥವಾ ಮತ್ತೊಂದು ಮೋಸದ ಅಧ್ಯಾಯವೇ ಎಂಬ ಪ್ರಶ್ನೆ ಇದೀಗ ಎದ್ದಿದೆ.



