ವಿಜಯಸಾಕ್ಷಿ ಸುದ್ದಿ, ಗದಗ: ತಿಮ್ಮಾಪೂರ ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆಯಿದ್ದು, ಡಿಬಿಓಟಿ ನೀರು ಕುಡಿಯಲು ಬಳಸಲಾಗುತ್ತಿದೆ. ಸದರಿ ಗ್ರಾಮಕ್ಕೆ ಹರ್ಲಾಪುರ ಗ್ರಾಮದ ಮಹಡಿ ಗುಡ್ಡದ ಹತ್ತಿರ ಒಂದು ಬೋರ್‌ವೆಲ್ ಇದ್ದು, ಬೋರವೆಲ್‌ನಿಂದ ಈ ಹಿಂದೆ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿತ್ತು. ಸದ್ಯ ಪೈಪ್‌ಲೈನ್ ದುರಸ್ತಿಯಿಂದ ಅದೂ ಸಹ ನಿಂತು ಹೋಗಿದೆ.
ಜುಲೈ ಮೊದಲನೇ ವಾರದಲ್ಲಿ ಡಿಬಿಓಟಿ ನೀರು ಪೂರೈಸುವ ಕೇಂದ್ರ ಸ್ಥಳದಲ್ಲಿ ವಿದ್ಯುತ್ ಪೂರೈಕೆಯ ಸಮಸ್ಯೆಯಿಂದ ಗ್ರಾಮಕ್ಕೆ ನೀರು ಪೂರೈಕೆಯಾಗುವಲ್ಲಿ ಸಮಸ್ಯೆಯಾಗಿದೆ. ಈ ಕುರಿತು ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೊಂದಿಗೆ ಸಮಾಲೋಚಿಸಿ ಜುಲೈ 6ರಿಂದ ಸರಾಸರಿ 2.40 ಲಕ್ಷ ಲೀಟರ್ ನೀರು ಪೂರೈಕೆ ಆಗುವಂತೆ ಕ್ರಮಕೈಗೊಳ್ಳಲಾಗಿದೆ.
ತಿಮ್ಮಾಪೂರ ಗ್ರಾಮದಲ್ಲಿ ಕುಡಿಯುವ ನೀರಿನ ವಿತರಣೆ ಮಾಡುವಾಗ ಕೆಲವೊಂದು ಕುಟುಂಬದವರು ನಳಕ್ಕೆ ನೇರವಾಗಿ ಮೋಟರ್ ಮೂಲಕ ನೀರನ್ನು ಪಂಪ್ ಮಾಡುವುದರಿಂದ ಎತ್ತರದ ಭಾಗದ ಮನೆಗಳಿಗೆ ನೀರು ಪೂರೈಕೆಯಲ್ಲಿ ಸಮಸ್ಯೆ ಆಗುತ್ತಿದ್ದು, ಸದರಿ ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮನವೋಲಿಸಿ ಮೋಟಾರ್ ಹಚ್ಚದಂತೆ ಕ್ರಮ ಕೈಗೊಳ್ಳಲಾಗಿದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಚರ್ಚಿಸಿ, ಜಿಲ್ಲಾ ಕುಡಿಯುವ ನೀರಿನ ಅನುದಾನದಲ್ಲಿ ಹರ್ಲಾಪೂರ ಗ್ರಾಮದ ಹತ್ತಿರ ಇರುವ ಮಹಡಿ ಗುಡ್ಡದ ಬೋರ್‌ವೆಲ್‌ನ ಪೈಪ್‌ಲೈನನ್ನು ದುರಸ್ತಿಪಡಿಸಿ ಕುಡಿಯವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲಾಗುವುದೆಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.