ಹಲವು ವರ್ಷಗಳಿಂದ ಸ್ಥಗಿತಗೊಂಡ ಕುಡಿಯುವ ನೀರು ಸರಬರಾಜು ಯೋಜನೆ

0
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಮತ್ತು ಮುಳಗುಂದ ಪಟ್ಟಣ ಹಾಗೂ ಮಾರ್ಗಮಧ್ಯೆ 9 ಗ್ರಾಮಗಳಿಗೆ ತುಂಗಭದ್ರಾ ನದಿ ಮೂಲದಿಂದ ಯುಐಡಿಎಸ್‌ಎಸ್‌ಎಂಟಿ ಕುಡಿಯುವ ನೀರು ಸರಬರಾಜು ಯೋಜನೆಯು ಸಮರ್ಪಕ ನಿರ್ವಹಣೆ ಕೊರತೆಯಿಂದಲೋ ಅಥವಾ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದಲೋ ಹಲವು ವರ್ಷಗಳಿಂದ ಸ್ಥಗಿತಗೊಂಡು, ಸಾರ್ವಜನಿಕರ ಕೋಟ್ಯಂತರ ತೆರಿಗೆ ಹಣ ಯೋಜನೆಗಾಗಿ ನೀರಿನಂತೆ ಹರಿದಿದ್ದು, ಸಾರ್ಥಕವಾಗಲಿಲ್ಲವೆಂಬುದು ಈ ಭಾಗದ ಪ್ರಜ್ಞಾವಂತರ ಅನಿಸಿಕೆಯಾಗಿದೆ.

Advertisement

2015ರಲ್ಲಿ ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಈ ಬೃಹತ್ ಯೋಜನೆಗೆ ಚಾಲನೆ ನೀಡಿದ್ದರು. ನಂತರದ ವರ್ಷಗಳಲ್ಲಿ ಶಿರಹಟ್ಟಿ ಮತ್ತು ಮುಳಗುಂದ ಸೇರಿದಂತೆ 9 ಗ್ರಾಮಗಳಿಗೆ ಈ ಯೋಜನೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿತ್ತು. ಕಾಲಾಂತರದಲ್ಲಿ ನಿರ್ವಹಣೆ ಕೊರತೆಯಿಂದ ಆಗಿಂದಾಗ್ಗೆ ಸ್ಥಗಿತಗೊಳ್ಳುತ್ತಲೇ ಇತ್ತು. ಬೆಳ್ಳಟ್ಟಿ ಶುದ್ಧ ನೀರಿನ ಘಟಕದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸಹ ಸರಿಯಾಗಿ ವೇತನ ಪಾವತಿ ಆಗಿರಲಿಲ್ಲ. ಅವರು ಸಹ ಘಟಕ ಸ್ಥಗಿತಗೊಳಿಸಿ ಅನೇಕ ಬಾರಿ ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದೇ ಇದ್ದುದರಿಂದ ಘಟಕ ಸ್ಥಗಿತಗೊಂಡಿದ್ದು, ಮತ್ತೆ ಕಾರ್ಯಾರಂಭವಾಗಲೇ ಇಲ್ಲ.

ಈ ಯೋಜನೆಗೆ ಹೊಳೆ-ಇಟಗಿಯ ತುಂಗಭದ್ರಾ ನದಿಯಿಂದ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿತ್ತು. ಇದಕ್ಕಾಗಿ ಬೆಳ್ಳಟ್ಟಿ ಸಮೀಪ ನಿರ್ಮಾಣವಾಗಿದ್ದ ನೀರು ಶುದ್ಧೀಕರಣ ಘಟಕ ಸ್ಥಗಿತಗೊಂಡಿದ್ದರಿಂದ ಇಂದು ಅನೈತಿಕ ತಾಣವಾಗಿ ಮಾರ್ಪಡುತ್ತಿದ್ದು, ಈ ಭಾಗದ ಜನತೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕಿನಾದ್ಯಂತ ಡಿಬಿಓಟಿ ಮತ್ತು ಎಂವಿಎಸ್ (ಮಲ್ಟಿ ವಿಲೇಜ್ ಸ್ಕೀಮ್) ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಸರಬರಾಜಿನಲ್ಲಿ ವ್ಯತ್ಯಯವಾದ ಸಂದರ್ಭದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು ಮತ್ತು ಗ್ರಾ.ಪಂ ಮಟ್ಟದ ಸಿಬ್ಬಂದಿಗಳು ಸರಿಪಡಿಸಿ ಜನತೆಗೆ ನೀರು ಪೂರೈಕೆ ಮಾಡುತ್ತಿದ್ದಾರೆ.

ತಾಲೂಕಿನ ಜನತೆಗೆ ಕುಡಿಯುವ ನೀರಿಗೆ ತುಂಗಭದ್ರಾ ನದಿಯೇ ಪ್ರಮುಖ ಆಸರೆಯಾಗಿದ್ದು, ಸದ್ಯ ಇರುವ ಎರಡೂ ಯೋಜನೆಗಳಲ್ಲಿಯೂ ತುಂಗಭದ್ರಾ ನದಿಯ ಮೂಲಕವೇ ಸರಬರಾಜು ಮಾಡಲಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗುವ ಸಂದರ್ಭದವರೆಗೂ ನಿರಂತರವಾಗಿ ತಾಂತ್ರಿಕ ದೋಷಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ನೀರು ಪೂರೈಕೆಯಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬೆಳ್ಳಟ್ಟಿ ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ತಿಮ್ಮರಡ್ಡಿ ಮರಡ್ಡಿ, ಶಿರಹಟ್ಟಿ-ಮುಳಗುಂದ ಸೇರಿದಂತೆ 9 ಗ್ರಾಮಗಳ ಜನತೆಗೆ ವರದಾನವಾಗಬೇಕಿದ್ದ ಯೋಜನೆಯು ಸಮರ್ಪಕ ನಿರ್ವಹಣೆ ಕೊರತೆಯಿಂದಲೋ, ಅಧಿಕಾರಿಗಳ ನಿರ್ಲಕ್ಷö್ಯದಿಂದಲೋ ಸ್ಥಗಿತಗೊಂಡಿರುವುದು ಸಾರ್ವಜನಿಕರ ಕೋಟ್ಯಂತರ ತೆರಿಗೆ ಹಣ ಸದುಪಯೋಗವಾಗದೇ ಇರುವುದು ದುರ್ದೈವದ ಸಂಗತಿ. ಯೋಜನೆ ಸ್ಥಗಿತಗೊಂಡಿದ್ದ ರಿಂದ ಗ್ರಾಮದ ಶುದ್ಧೀಕರಣ ಘಟಕ ಇಂದು ಅನೈತಿಕ ತಾಣವಾಗಿ ಮಾರ್ಪಡುತ್ತಿದೆ. ಈ ಬಗ್ಗೆ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು.

ಶಿರಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಪ್ರತಿಕ್ರಿಯಿಸಿ, ಕೆಯುಡಬ್ಲುöಎಸ್ ಟೆಂಡರ್ ಕರೆದಿದ್ದು, ಸಧ್ಯದಲ್ಲಿಯೇ ರಿಪೇರಿ ಕೆಲಸ ಮುಗಿಸಿ ಸ್ಥಗಿತಗೊಂಡಿರುವ ನೀರು ಸರಬರಾಜು ಯೋಜನೆ ಮತ್ತೆ ಪ್ರಾರಂಭವಾಗಲಿದೆ ಎಂದರು.


Spread the love

LEAVE A REPLY

Please enter your comment!
Please enter your name here