ವಿಜಯಸಾಕ್ಷಿ ಸುದ್ದಿ, ರೋಣ : ರೋಣ ನಗರದ ಪ್ರತಿ ಮನೆಗೂ ಕೆವಲ 6 ತಿಂಗಳಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವುದು ಎಂದು ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ರವಿವಾರ ಸಂಜೆ ಅಮೃತ 2.0 ಯೋಜನೆಯಡಿ 20 ಕೋಟಿ 18 ಲಕ್ಷ ರೂಗಳ ವೆಚ್ಚದಲ್ಲಿ ಕುಡಿಯುವ ನೀರು ವಿತರಣಾ ಜಾಲ ಅಳವಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಈ ಹಿಂದೆ ರೋಣ ನಗರಕ್ಕೆ ಚೋಳಗುಡ್ಡದಿಂದ ನೀರು ಪೂರೈಕೆಯಾಗುತ್ತಿರುವ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೇವೆ. ನಂತರ ಜಿಗಳೂರ ಕೆರೆಗೆ ಹೆಚ್ಚುವರಿಯಾಗಿ 60 ಕೋಟಿ ರೂ ಅನುದಾನವನ್ನು ತರುವ ಮೂಲಕ ರೋಣ ಪಟ್ಟಣವನ್ನು ಯೋಜನೆಗೆ ಸೇರಿಸಿ ಅಲ್ಲಿಂದ ನೀರು ಪೂರೈಕೆ ಮಾಡುವ ಕ್ರಮ ತೆಗೆದುಕೊಳ್ಳಲಾಯಿತು. ಈಗ ಮತ್ತೆ ನಿಮ್ಮ ಆಶೀರ್ವಾದಿಂದ ಶಾಸಕನಾಗಿದ್ದು, 20 ಕೋಟಿ 18 ಲಕ್ಷ ರೂಗಳ ವೆಚ್ಚದಲ್ಲಿ, ಮುಂದಿನ 6 ತಿಂಗಳುಗಳೊಳಗೆ ಪ್ರತಿ ಮನೆಗೆ ಕುಡಿಯುವ ನೀರು ಪೂರೈಸಲಾಗುವುದು ಎಂದರು.
ಮುಖ್ಯವಾಗಿ ರೋಣ ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಈಗಾಗಲೇ 20 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು.
ಅಬ್ಬಿಗೇರಿ ರಸ್ತೆ, ಎಂಆರ್‌ಬಿಸಿ ಕಾಲುವೆಯಿಂದ ಮುದೇನಗುಡಿ ರಸ್ತೆಯವರೆಗೆ ಕಾಮಗಾರಿ ನಡೆಯಲಿದ್ದು, ಇದರಲ್ಲಿ ಪಾದಚಾರಿಗಳಿಗೆ ಪ್ರತ್ಯೇಕ ರಸ್ತೆಯನ್ನು ನಿರ್ಮಿಸಲಾಗುವುದು. ಹೀಗಾಗಿ ಪಟ್ಟಣದ ನಿವಾಸಿಗಳು ಅಭಿವೃದ್ಧಿಗೆ ಕೈ ಜೊಡಿಸಬೇಕು ಎಂದ ಅವರು, 2 ಕೋಟಿ ರೂಗಳ ವೆಚ್ಚದ ಸಿಸಿ ರಸ್ತೆಗಳ ನಿರ್ಮಾಣ ಕಾರ್ಯ ಕೂಡ ಪ್ರಗತಿಯಲ್ಲಿದೆ. ಪಟ್ಟಣದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದ್ದು, ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದರು.
ಐ.ಎಸ್. ಪಾಟೀಲ, ರಂಗವ್ವ ಭಜಂತ್ರಿ, ಸಂಗನಗೌಡ ಪಾಟೀಲ, ಮುತ್ತಣ್ಣ ಸಂಗಳದ, ವೆಂಕಣ್ಣ ಬಂಗಾರಿ, ಯೂಸುಫ್ ಇಟಗಿ, ಸಂಗು ನವಲಗುಂದ, ಅಪ್ಪಣ್ಣ ಗಿರಡ್ಡಿ, ಶಿವು ಹುಲ್ಲೂರ, ಮೌನೇಶ ಹಾದಿಮನಿ, ದಾವಲಸಾಬ ಬಾಡಿನ, ಸಂಗಪ್ಪ ಜಿಡ್ಡಿಬಾಗಿಲ್, ಗದಿಗೇಪ್ಪ ಕಿರೇಸೂರ ಸೇರಿದಂತೆ ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಶಾಸಕ ಜಿ.ಎಸ್. ಪಾಟೀಲರು ವರ್ಷದ ಅವಧಿಯಲ್ಲಿ ಮತಕ್ಷೇತ್ರಕ್ಕೆ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ತರುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದು ಹೆಮ್ಮೆಯ ಸಂಗತಿಯಾಗಿದೆ.
– ವೆಂಕಣ್ಣ ಬಂಗಾರಿ.
ಪುರಸಭೆಯ ಮಾಜಿ ಅಧ್ಯಕ್ಷರು, ರೋಣ.