ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಕೆಎಸ್ಆರ್ಟಿಸಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಚಾಲಕ ಎಸ್.ಪಿ. ಲಕ್ಷ್ಮಣ (53) ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಮಂಗಳವಾರ ಜರುಗಿದೆ.
ಲಕ್ಷ್ಮೇಶ್ವರದ ಸಾರಿಗೆ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಚಾಲಕ ಎಸ್.ಪಿ. ಲಕ್ಷ್ಮಣ ಅವರಿಗೆ ಮಂಗಳವಾರ ಸಂಜೆಯ ವೇಳೆಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಸ್ಥಳಿಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಲಕ್ಷ್ಮಣ ಮೂಲತಃ ಲಕ್ಷೇಶ್ವರ ತಾಲೂಕಿನ ಗೋವಿನಕೊಪ್ಪ ಗ್ರಾಮದವರಾಗಿದ್ದು, ಕಳೆದ 24 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸತತ 15 ವರ್ಷಗಳ ಕಾಲ ಅಪಘಾತ ರಹಿತ ಚಾಲನೆಗೆ ಮುಖ್ಯಮಂತ್ರಿಗಳ ಬಂಗಾರದ ಪದಕಕ್ಕೆ ಭಾಜನರಾಗಿದ್ದರು. ಅಪ್ಪಟ ಕನ್ನಡ ಪ್ರೇಮಿಯಾಗಿದ್ದ ಅವರು ಪ್ರತಿವರ್ಷ ರಾಜ್ಯೋತ್ಸವದ ದಿನ ಬಸ್ಸನ್ನು ಕನ್ನಡದ ತೇರನ್ನಾಗಿ ಸಿಂಗರಿಸುತ್ತಿದ್ದರು. ಇವರ ಅಕಾಲಿಕ ನಿಧನಕ್ಕೆ ಸಾರಿಗೆ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತದ ಪ್ರಕರಣಗಳ ನಡುವೆ ಈ ಸಾವು ಆತಂಕ ಮೂಡಿಸಿದೆ.