ಕೋಲಾರ:- ಇಲ್ಲಿನ ಕೆಜಿಎಫ್ನ ಬೆಮೆಲ್ ನಗರ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದ ಘಟನೆ ಜರುಗಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಸುಮಾರು 20 ಮಂದಿ ಪವಾಡದ ರೀತಿ ಬಚಾವ್ ಆಗಿದ್ದಾರೆ.
ಅಪಘಾತಕ್ಕೀಡಾದ ಬಸ್, ನರಸಾಪುರ ಕೈಗಾರಿಕಾ ಪ್ರದೇಶದ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಗೆ ಸೇರಿದ್ದು ಎನ್ನಲಾಗಿದೆ. ಘಟನೆಯಿಂದ 8 ಮಂದಿ ಗಾಯಗೊಂಡಿದ್ದಾರೆ. ಬಸ್ನಲ್ಲಿ 20 ಜನ ಇದ್ದರು. ಅದೃಷ್ಟವಶಾತ್, ಬಸ್ನಲ್ಲಿದ್ದವರಿಗೆ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಗಾಯಾಳುಗಳನ್ನು ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೊದಲ ಪಾಳಿಯ ಕಾರ್ಮಿಕರನ್ನು ಕರೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.



