ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಖಾಸಗಿ ಶಾಲೆಯ ಬಸ್ಸಿನ ಚಕ್ರಕ್ಕೆ ಸಿಲುಕಿ ಬಾಲಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬುಧವಾರ ಲಕ್ಷ್ಮೇಶ್ವರ ಸಮೀಪದ ದೊಡ್ಡೂರ ಹತ್ತಿರ ನಡೆದಿದೆ. ದೊಡ್ಡೂರ ತಾಂಡಾದ ಎಲ್‌ಕೆಜಿ ಓದುತ್ತಿರುವ 4 ವರ್ಷದ ಪ್ರಥಮ ಅರುಣ ಲಮಾಣಿ ಮೃತಪಟ್ಟ ಬಾಲಕ.
ಘಟನೆಯ ವಿವರ: ತಾಲೂಕಿನ ಶಿಗ್ಲಿ ಹತ್ತಿರದ ಲಕ್ಷ್ಮೇಶ್ವರ ಮೂಲದ ಲಿಟಲ್ ಹಾರ್ಟ್ ಇಂಟರ್‌ನ್ಯಾಶನಲ್ ಶಾಲೆಯ ಬಸ್ ಬುಧವಾರ ಮಧ್ಯಾಹ್ನ ಶಾಲಾ ಅವಧಿಯ ನಂತರ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅವರ ಊರಿಗೆ ಬಿಟ್ಟು ಬರಲು ಹೊರಟಿತ್ತು. ಈ ವೇಳೆ ಚಾಲಕನ ಅತಿಯಾದ ವೇಗ, ನಿರ್ಲಕ್ಷ್ಯದಿಂದ ಶಾಲೆಯ ಎಲ್‌ಕೆಜಿ ವಿದ್ಯಾರ್ಥಿ ಬಸ್ಸಿನಿಂದ ಕೆಳಗೆ ಬಿದ್ದಿದ್ದಾನೆ. ಬಸ್ಸಿನ ಚಕ್ರಕ್ಕೆ ಸಿಲುಕಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಸ್ಸಿನಲ್ಲಿನ ಮಕ್ಕಳ ಚೀರಾಟ, ಆಕ್ರಂದನದಿಂದ ಬಸ್ ನಿಲ್ಲಿಸಿದ ಚಾಲಕ-ನಿರ್ವಾಹಕರಿಬ್ಬರೂ ಮೃತ ಬಾಲಕನನ್ನು ಬಸ್ಸಿನೊಳಗೆ ಹಾಕಿಕೊಂಡು ಊರ ಹೊರವಲಯದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಮಕ್ಕಳ ಕೂಗಾಟ ಕೇಳಿದ ಸಾರ್ವಜನಿಕರು ವಿಷಯವನ್ನು ಪೊಲೀಸ್ ಠಾಣೆಗೆ ತಲುಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಪಾಲಕರು, ತಾಂಡಾದ ನಿವಾಸಿಗಳು ಸ್ಥಳಕ್ಕೆ ದೌಡಾಯಿಸಿ ಮಗುವಿನ ಸ್ಥಿತಿ ಕಂಡು ನೆಲಕ್ಕೊರಗಿ ಎದೆ ಬಡಿದುಕೊಂಡು ಅತ್ತಿದ್ದಾರೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆ ರಜೆಯ ಮೇಲೆ ಊರಿನಲ್ಲಿದ್ದು, ಮಗನ ದುರಂತ ಅಂತ್ಯ ನೋಡಲೆಂದೇ ಬಂದಂತೆ ಆಗಿತ್ತು. ತಂದೆ-ತಾಯಿ, ಪಾಲಕರ ಆಕ್ರಂದನ ನೆರದವರ ಕಣ್ಣಲ್ಲಿ ನೀರು ತರಿಸಿತ್ತು.
ಘಟನೆಯ ನಂತರ ಚಾಲಕರ, ಶಾಲೆಯವರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಕ್ಸ್
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಬಲವರ್ಧನೆಯ ನಡುವೆಯೂ ಹೆಚ್ಚುತ್ತಿರುವ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಸ್ಪರ್ಧೆಗೆ ಬಿದ್ದಂತೆ ವರ್ತಿಸುತ್ತಿವೆ. ಶಾಲಾ ವಾಹನಗಳಲ್ಲಿ ನಿಯಮ ಮೀರಿ ಮಕ್ಕಳನ್ನು ಸಾಗಿಸಲಾಗುತ್ತಿದೆ. ಕೆಲ ಶಾಲೆಗಳ ಬಸ್ಸಿನ ಚಾಲಕರಿಗೆ ಲೈಸನ್ಸ್ ಕೂಡ ಇರುವುದಿಲ್ಲ. ಟ್ರ್ಯಾಕ್ಟರ್-ಟೆಂಪೋ ಓಡಿಸುವ ಚಾಲಕರು ಬಸ್ಸನ್ನು ರಬ್ಬರಿ ಚಲಾಯಿಸುತ್ತಾರೆ. ದುಡ್ಡು ಮಾಡುವ ಧಾವಂತದಲ್ಲಿ ಮಕ್ಕಳ ಅಮೂಲ್ಯ ಜೀವದೊಂದಿಗೆ ಚೆಲ್ಲಾಟವಾಡುವ ಖಾಸಗಿ ಶಾಲೆಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು, ಆರ್‌ಟಿಓ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.



