ಬೆಂಗಳೂರು;- ಮಳೆಯ ಕೊರತೆ ಹಿನ್ನೆಲೆ 5,326 ಕೋಟಿ ರೂ.ಪರಿಹಾರ ಕೋರಿ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಈಗಾಗಲೆ ಘೋಷಿಸಲಾಗಿದೆ. ಇದರ ಜೊತೆಗೆ ಇನ್ನೂ 21 ತಾಲೂಕುಗಳನ್ನು ಅ.12ರಂದು ಬರಪೀಡಿತ ಎಂದು ಘೋಷಿಸಿ ಹೊರಡಿಸಿದ್ದ ಆದೇಶಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.
ಬರಪರಿಸ್ಥಿತಿಯಿಂದಾಗಿ ಅಂದಾಜು 33,770 ಕೋಟಿ ರೂ.ಗಳಷ್ಟು ಕೃಷಿ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಎನ್‍ಡಿಆರ್ ಎಫ್ ನಿಯಮಾವಳಿಗಳ ಪ್ರಕಾರ 4,414 ಕೋಟಿ ರೂ.ಗಳ ಬೆಳೆ ಪರಿಹಾರ, ಜಾನುವಾರುಗಳಿಗೆ ಸಂಬಂಧಿಸಿದಂತೆ 355 ಕೋಟಿ ರೂ., ಕುಡಿಯುವ ನೀರು ಸರಬರಾಜು ಮಾಡಲು 554 ಕೋಟಿ ರೂ.ಸೇರಿದಂತೆ 5326.87 ಕೋಟಿ ರೂ.ಗಳ ಪರಿಹಾರ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ರಸಗೊಬ್ಬರ ಬಫರ್ ಸ್ಟಾಕ್ ದಾಸ್ತಾನು ಮಾಡಲು ರಾಜ್ಯ ಸಹಕಾರ ಮಾರಾಟ ಮಂಡಳಿಗೆ 200 ಕೋಟಿ ರೂ. ಹಾಗೂ ರಾಜ್ಯ ಬೀಜ ನಿಗಮಕ್ಕೆ 200 ಕೋಟಿ ರೂ.ಗಳ ಬ್ಯಾಂಕ್ ಸಾಲಕ್ಕೆ ಸರಕಾರದ ಖಾತ್ರಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.