ಸುಮಾರು 350-400ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಹೇಮಾ ಕೊಲ್ಲ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಹೇಮಾ ಕೊಲ್ಲ ಡ್ರಗ್ ಕೇಸ್ ನಲ್ಲಿ ಸಿಕ್ಕಿ ಬಿದ್ದ ಬಳಿಕ ಅವರ ಜೀವನವೇ ಬದಲಾಗಿ ಬಿಟ್ಟಿದೆ. ಸದ್ಯ ಹೇಮಾ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ್ದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಕಳೆದ ವರ್ಷ ಜೂನ್ ತಿಂಗಳಲ್ಲಿ ಬೆಂಗಳೂರಿನ ಹೆಬ್ಬಗೋಡಿಯ ಹುಸ್ಕೂರು ಸಮೀಪದ ಜಿಆರ್ ಫಾರ್ಮ್ನಲ್ಲಿ ನಡೆಯುತ್ತಿದ್ದ ಪಾರ್ಟಿಯ ಮೇಲೆ ಬೆಂಗಳೂರು ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಹಲವು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದು ಪಾರ್ಟಿಯಲ್ಲಿ ನಟಿ ಹೇಮಾ ಸಹ ಭಾಗಿಯಾಗಿದ್ದರು. ನಟಿ ಹೇಮಾ ಅವರನ್ನು ಸಹ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಸುಮಾರು ಒಂದು ವಾರಗಳ ಕಾಲ ಜೈಲಿನಲ್ಲಿದ್ದ ಹೇಮಾ ಜಾಮೀನು ಪಡೆದು ಹೊರ ಬಂದಿದ್ದರು. ಆ ಬಳಿಕ ಹೇಮಾ ಅವರಿಗೆ ಸಿನಿಮಾಗಳ ಆಫರ್ ಗಳು ಕಡಿಮೆಯಾಗಲು ಶುರುವಾದವು.
ಡ್ರಗ್ ಕೇಸ್ ನಲ್ಲಿ ಹೇಮಾ ಹೆಸರು ಕೇಳಿ ಬಂದ ಬಳಿಕ ಅವರನ್ನು ಮಾ ಸಂಘದಿಂದ ಹೊರ ಹಾಕಲಾಯ್ತು. ನಟಿಯ ಕೈಯಲ್ಲಿದ್ದ ಸಿನಿಮಾ ಆಫರ್ಗಳು ಸಹ ತಪ್ಪಿ ಹೋದವು. ಆ ಪ್ರಕರಣ ನಡೆದ ಬಳಿಕ ಹೇಮಾ ಕೊಲ್ಲ ಕೇವಲ ಒಂದು ಸಿನಿಮಾದಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದಾರೆ. ಸದ್ಯ ಹೇಮಾ ಕೈಯಲ್ಲಿ ಯಾವುದೇ ಸಿನಿಮಾಗಳು ಸಹ ಇಲ್ಲ.
ಇತ್ತೀಚೆಗೆ ಹೈದರಾಬಾದ್ನಲ್ಲಿ ಶಾಪ್ ಒಂದರ ಉದ್ಘಾಟನೆಗೆ ಆಗಮಿಸಿದ್ದ ಹೇಮಾ ಕೊಲ್ಲ ಅವರನ್ನು ಸಿನಿಮಾಗಳಲ್ಲಿ ನಟಿಸುತ್ತಿಲ್ಲವೇ ಎಂದು ಪತ್ರಕರ್ತರು ಕೇಳಿದಾಗ, ‘ನಾನು ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟುಬಿಟ್ಟಿದ್ದೇನೆ. ಚಿತ್ರರಂಗದಿಂದ ನಿವೃತ್ತಿ ತೆಗೆದುಕೊಂಡಿದ್ದೇನೆ. ಈಗ ನಾನು ಲೈಫ್ ಅಲ್ಲಿ ಚಿಲ್ ಮಾಡುತ್ತಿದ್ದೇನೆ. ಎಂಜಾಯ್ ಮಾಡುತ್ತಿದ್ದೇನೆ. ನನಗೆ 14 ವರ್ಷ ಇದ್ದಾಗಿನಿಂದಲೂ ನಟಿಸುತ್ತಿದ್ದೇನೆ. ಜೀವನದಲ್ಲಿ ಈ ವರೆಗೆ ಬಹಳ ಕಷ್ಟಪಟ್ಟಿದ್ದೀನಿ. ಇನ್ನು ಸಾಕು ಅನಿಸುತ್ತಿದೆ. ಹಾಗಾಗಿ ಜೀವನ ಎಂಜಾಯ್ ಮಾಡುತ್ತಿದ್ದೀನಿ. ನನ್ನನ್ನು ನಾನು ಪ್ರೀತಿಸಿಕೊಳ್ಳುತ್ತಿದ್ದೀನಿ. ಮುಂದೆ ಎಂದಾದರೂ ಬೋರ್ ಹೊಡೆದರೆ ಆಗ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಆಲೋಚಿಸುತ್ತೇನೆ’ ಎಂದು ನಟಿ ಹೇಮಾ ಕೊಲ್ಲ ಹೇಳಿದ್ದಾರೆ.