ಬೆಂಗಳೂರು: ಬೆಂಗಳೂರಿನ ಅಮೃತಹಳ್ಳಿ ಪೊಲೀಸರು ಬೃಹತ್ ಡ್ರಗ್ ಜಾಲವೊಂದನ್ನು ಭೇದಿಸಿ ಕೇರಳ ಮೂಲದ ಏಳು ಮಂದಿ ಸೇರಿ ಒಟ್ಟು ಹತ್ತು ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಮತ್ತು ಅಭಿನವ್ ಬಂಧಿತರು ಎನ್ನಲಾಗಿದೆ. ಇವರಲ್ಲಿ ಇಬ್ಬರು ಕರ್ನಾಟಕ, ಒಬ್ಬ ಆಂಧ್ರಪ್ರದೇಶ ಹಾಗೂ ಉಳಿದ ಏಳು ಮಂದಿ ಕೇರಳ ಮೂಲದವರಾಗಿದ್ದಾರೆ.
ಆರೋಪಿಗಳು ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ಸ್ ತರಿಸಿಕೊಂಡು ‘ಟೀಂ ಕಲ್ಕಿ’ ಎಂಬ ಡಾರ್ಕ್‌ವೆಬ್ ವೆಬ್‌ಸೈಟ್ ಮೂಲಕ ಆರ್ಡರ್ ನೀಡಿ ಬೆಂಗಳೂರಿನಾದ್ಯಂತ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಥೈಲ್ಯಾಂಡ್‌ನಲ್ಲಿರುವ ಕೇರಳ ಮೂಲದ ವ್ಯಕ್ತಿಯೊಬ್ಬ ಬೆಂಗಳೂರಿಗೆ ಡ್ರಗ್ಸ್ ಕಳುಹಿಸುತ್ತಿದ್ದರೆ, ಇಲ್ಲಿಗೆ ತಲುಪಿದ ಬಳಿಕ ಯಲಹಂಕ, ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು ಸೇರಿದಂತೆ ವಿವಿಧ ಪ್ರದೇಶಗಳನ್ನು ಹಂಚಿಕೊಂಡು ಆರೋಪಿಗಳು ಡ್ರಗ್ಸ್ ವಿತರಿಸುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು, ಐಟಿ–ಬಿಟಿ ಉದ್ಯೋಗಿಗಳು ಹಾಗೂ ಪಾರ್ಟಿಗಳಿಗೆ ಬರುವವರೇ ಇವರ ಪ್ರಮುಖ ಗುರಿಯಾಗಿದ್ದು, ಪ್ರದೇಶ ಹಂಚಿಕೆಯ ವಿಚಾರವಾಗಿ ಪೆಡ್ಲರ್‌ಗಳ ನಡುವೆ ಆಗಾಗ ಜಗಳಗಳು ನಡೆದಿದ್ದು, ಕೆಲವೊಮ್ಮೆ ಮಾರಣಾಂತಿಕ ಹಲ್ಲೆ ಹಾಗೂ ಕೊಲೆ ಹಂತದವರೆಗೂ ಸಂಘರ್ಷ ತಲುಪಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ 3 ಕೆಜಿ ಹೈಡ್ರೋ ಗಾಂಜಾ, 10 ಕೆಜಿ ಗಾಂಜಾ, 500 ಎಲ್‌ಎಸ್‌ಡಿ ಸ್ಟ್ರಿಪ್ಸ್, ಎರಡು ಕಾರುಗಳು ಹಾಗೂ 10 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಮುಖ್ಯ ಆರೋಪಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆತನಿಗಾಗಿ ತೀವ್ರ ಶೋಧ ಮುಂದುವರಿದಿದೆ.



