ಹೈದರಾಬಾದ್:- ವೇಗವಾಗಿ ಬಂದ ಕಾರು ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನಪ್ಪಿದ ಘಟನೆ ಹೈದರಾಬಾದ್‍ನ ಜೀಡಿಮೆಟ್ಲಾ ಪ್ರದೇಶದಲ್ಲಿ ಜರುಗಿದೆ.
ಗೋಪಿ ಎಂಬುವವರು ಈ ಅಪಘಾತದಲ್ಲಿ ಸಾವನಪ್ಪಿದ ವ್ಯಕ್ತಿ. ಇವರು ವಾಚ್‍ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜೀಡಿಮೆಟ್ಲಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಗಜುಲಾ ರಾಮರಾಮ್‍ನಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗೋಪಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಅವರು ಗಾಳಿಯಲ್ಲಿ ಹಾರಿ ಹೋಗಿ ಕೆಳಗೆ ಬಿದ್ದಿದ್ದಾರೆ. ಇದರ ಪರಿಣಾಮವಾಗಿ ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಮದ್ಯದ ಅಮಲಿನಲ್ಲಿ ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಮನೀಶ್ ಗೌಡ ಎಂಬ 20 ವರ್ಷದ ದ್ವಿತೀಯ ಪಿಯುಸಿ ವಿದ್ಯಾರ್ಥಿ ತನ್ನ ಇತರ ಐವರು ಗೆಳೆಯರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಇಂತಹ ಭೀಕರ ಕೃತ್ಯ ಎಸಗಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಅಪಘಾತದ ನಂತರ ಆರೋಪಿ ಮತ್ತು ಇತರ ಐವರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದರು. ಆದರೆ ಅಲ್ಲಿದ್ದವರು ಆರೋಪಿ ಮನೀಶ್ ಗೌಡ್‌ನನ್ನು ಹಿಡಿದು ಜೀಡಿಮೆಟ್ಲಾ ಪೊಲೀಸರ ವಶಕ್ಕೆ ನೀಡಿದ್ದಾರೆ. ಆದರೆ ಆತನ ಐವರು ಸ್ನೇಹಿತರು ಪರಾರಿಯಾಗಿದ್ದಾರೆ.
ಘಟನೆ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಕಾರನ್ನು ಚಾಲಕ ನಿರ್ಲಕ್ಷ್ಯದ ರೀತಿಯಲ್ಲಿ ಓಡಿಸಿ ವಾಚ್‍ಮ್ಯಾನ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಹಾಗೆಯೇ ವಿಡಿಯೊದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿ ಅಪಘಾತವನ್ನು ತಪ್ಪಿಸಲು ಪ್ರಯತ್ನಿಸುತ್ತಿರುವುದನ್ನು ಸಹ ಕಾಣಬಹುದು.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.