ಆನೇಕಲ್: ಕುಡಿದ ಮತ್ತಿನಲ್ಲಿ ಬಸ್ ಕದ್ದು ಎಸ್ಕೇಪ್ ಆಗಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ವಿದ್ಯುತ್ ಕಂಬಗಳು ಹಾಗೂ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಥಳಿ ರಸ್ತೆಯಲ್ಲಿ ನಡೆದಿದೆ.
ಅಪಘಾತದಿಂದ ಬಸ್ ಮುಂಭಾಗಕ್ಕೆ ಭಾರೀ ಹಾನಿಯಾಗಿದ್ದು, ರಾತ್ರಿ ವೇಳೆ ಜನ ಸಂಚಾರ ಕಡಿಮೆ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಎಂದಿನಂತೆ ರಸ್ತೆ ಬದಿ ಬಸ್ ಪಾರ್ಕ್ ಮಾಡಿ ಚಾಲಕ ತೆರಳಿದ್ದ ಸಂದರ್ಭ ಕುಡಿದ ಮತ್ತಿನಲ್ಲಿ ಬಂದ ನಾಲ್ವರು ಅಸಾಮಿಗಳು, ಬಸ್ ವೈರ್ ಕಟ್ ಮಾಡಿ ಕದ್ದೊಯ್ಯಲು ಯತ್ನಿಸಿದ್ದಾರೆ. ಆದರೆ ಚಾಲನೆ ವೇಳೆ ನಿಯಂತ್ರಣ ತಪ್ಪಿದ ಹಿನ್ನೆಲೆ, ಬಸ್ ಎರಡು ವಿದ್ಯುತ್ ಕಂಬಗಳಿಗೆ ಹಾಗೂ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ.
ಸಾರ್ವಜನಿಕರು ತಕ್ಷಣ ಬಸ್ ತಡೆದರೂ ಮೂವರು ಆರೋಪಿಗಳು ಪರಾರಿಯಾಗಿದ್ದು, ಸಿಕ್ಕಿಬಿದ್ದ ಒಬ್ಬನನ್ನು ಥಳಿಸಿ ಬಳಿಕ ಆನೇಕಲ್ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.



