ಬೆಂಗಳೂರು: ರಾಜ್ಯದಲ್ಲಿ ಮುಂದುವರಿದಿರುವ ಬಿಸಿಲಿನ ತೀವ್ರತೆ ನಡುವೆ ಇಂದು ಕೂಡ ಒಣ ಹವೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶವಿದ್ದು, ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಉಷ್ಣಾಂಶ ಹೆಚ್ಚಾಗಿದ್ದು, ಒಣ ಗಾಳಿಯೇ ಆವರಿಸಿದೆ. ಇಂದಿನಿಂದ ಇನ್ನೂ ಕೆಲವು ದಿನಗಳ ಕಾಲ ರಾಜ್ಯದಾದ್ಯಂತ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣ ಇರಲಿದೆ. ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಳೆಯ ಲಕ್ಷಣಗಳು ಕಾಣಿಸದಿದ್ದು, ಒಣ ಹವೆ ಮುಂದುವರಿಯಲಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಇದೇ ಸ್ಥಿತಿ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.
ಮಾರ್ಚ್ ಎರಡನೇ ವಾರದ ಬಳಿಕ ನಗರದಲ್ಲಿ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಲು ಸೂಚಿಸಲಾಗಿದೆ.
ಹೀಟ್ ಸ್ಟ್ರೋಕ್ ಹಾಗೂ ದೇಹದ ನೀರಿನ ಕೊರತೆ (ಡಿಹೈಡ್ರೇಶನ್) ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ವಿಶೇಷ ಜಾಗ್ರತೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೆಚ್ಚಾಗಿ ನೀರು, ತಂಪು ಪಾನೀಯಗಳು ಹಾಗೂ ಹಣ್ಣುಗಳನ್ನು ಸೇವಿಸಿ ದೇಹದ ತಾಪಮಾನ ನಿಯಂತ್ರಿಸಿಕೊಳ್ಳುವಂತೆ ಸೂಚಿಸಲಾಗಿದೆ.



