ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಒಣಹವೆ ವಾತಾವರಣ ಇದ್ದು, ಇಂದೂ ಸಹ ಅದೇ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಿನೇ ದಿನೇ ಚಳಿಗಾಲದ ಪ್ರಭಾವ ಹೆಚ್ಚಾಗುತ್ತಿದ್ದು, ಹಲವೆಡೆ ಬೆಳಗಿನ ಜಾವ ಮಂಜು ಹಾಗೂ ತಂಪು ಹವಾಮಾನ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಇನ್ನೆರಡು ದಿನಗಳ ಕಾಲ ಒಣಹವೆ ಮುಂದುವರಿಯಲಿದ್ದು, ನಂತರ ಕೆಲವು ಜಿಲ್ಲೆಗಳಲ್ಲಿ ಲಘು ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಣಹವೆ ಇರುವ ಜಿಲ್ಲೆಗಳು:-
ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಳೆಯ ಲಕ್ಷಣಗಳಿಲ್ಲ.
ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವಾಮಾನ ಮುಂದುವರಿಯಲಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿಯೂ ಇಂದು ಒಣಹವೆ ಮುಂದುವರಿಯಲಿದೆ.
ಬೆಂಗಳೂರು ಹವಾಮಾನ:-
ರಾಜಧಾನಿ ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದ್ದು, ಬೆಳಗಿನ ಜಾವ ಮಂಜು ಕಂಡುಬರುತ್ತಿದೆ. ಇಂದು ನಗರದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಇರಲಿದೆ. ಚಳಿಯಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಉಡುಪು ಧರಿಸುವುದು ಮತ್ತು ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.



