ವಿಜಯಸಾಕ್ಷಿ ಸುದ್ದಿ, ಗದಗ: ರೈತರಿಂದ ಕಡಲೆ ಖರೀದಿಸಿ ವ್ಯಾಪಾರಿಯೊಬ್ಬ ಅನ್ನದಾತರಿಗೆ ಮೋಸ ಮಾಡಿ ಪರಾರಿಯಾಗಿದ್ದು, ಬಾಕಿ ಇರುವ ಹಣವನ್ನು ರೈತರಿಗೆ ಕೊಡಿಸಬೇಕೆಂದು ಆಗ್ರಹಿಸಿ ಅನ್ನದಾತರು ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.
ಸೋಮವಾರ ರಾತ್ರಿಯಿಂದಲೇ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ನಡೆಸಿದ ಜಿಲ್ಲೆಯ ಕುರ್ತಕೋಟಿ, ಅಸುಂಡಿ, ಬಿಂಕದಕಟ್ಟಿ, ಅಂತೂರ ಬೆಂತೂರ ಸೇರಿ 11 ಗ್ರಾಮಗಳ ಕಡಲೆ ಮಾರಾಟ ಮಾಡಿದ ರೈತರಿಗೆ ಕೊಡಬೇಕಾದ ಹಣದಲ್ಲಿ 6 ಕೋಟಿಗೂ ಹೆಚ್ಚು ಹಣ ಬಾಕಿ ಇರಿಸಿಕೊಂಡಿದ್ದಾರೆ. ದಾವಣಗೆರೆ ಮೂಲದ ಕಡಲೆ ವ್ಯಾಪಾರಿ ಮಾರುತಿಗೌಡ ಅವರಿಂದ ರೈತರಿಗೆ ವಂಚನೆಯಾಗಿದ್ದು, ಮಹಿಳಾ ಸಂಘಗಳ ಮಧ್ಯಸ್ಥಿಕೆಯಲ್ಲಿ ಕಡಲೆ ಖರೀದಿ ಮಾಡಲಾಗಿತ್ತು. ಳೆದ ಹನ್ನೊಂದು ತಿಂಗಳಿಂದ ಹೋರಾಟ ಮಾಡುತ್ತಿರುವ ಅನ್ನದಾತರಿಗೆ ಇನ್ನೂ ಸಂಕಷ್ಟ ತಪ್ಪಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಮಂಗಳವಾರ ನಗರದ ಜಿಲ್ಲಾಡಳಿತ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಬಾರಕೋಲ್ ಚಾಟಿ ಬೀಸಿ, ಒನಕೆ ಹಿಡಿದು, ಕಚೇರಿಯ ಗೇಟ್‌ಗೆ ಜಾನುವಾರು ಕಟ್ಟಿ, ಪ್ರತಿಭಟನೆ ನಡೆಸಿ ಸುಮಾರು ಮೂರು ಗಂಟೆಗಳ ಕಾಲ ಮಾನವ ಸರಪಳಿ ನಿರ್ಮಿಸಿ ಗದಗ ಹುಬ್ಬಳ್ಳಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಿದ ರೈತರು ತಮ್ಮ ಆಕ್ರೋಶ ಹೊರಹಾಕಿದರು.
ಕಡಲೆ ವ್ಯಾಪಾರಿ ಮಾಡಿದ ಮೋಸದಿಂದ ಜಿಲ್ಲೆಯ ಸುಮಾರು 400ಕ್ಕೂ ಹೆಚ್ಚು ರೈತರಿಗೆ ಅನ್ಯಾಯವಾಗಿದ್ದು, ಕಡಲೆ ಮಾರಿದ ಹಣದ ಬಾಕಿ 6 ಕೋಟಿ 50 ಲಕ್ಷ ರೂಪಾಯಿ ಹಣವನ್ನು ರೈತರು ಕಳೆದುಕೊಂಡಿದ್ದಾರೆ. ಈ.ಪಂ ಎನ್.ಆರ್.ಎಲ್.ಎಮ್ ಸಂಜೀವಿನಿ ಒಕ್ಕೂಟದಿಂದ ಕಡಲೆ ಖರೀದಿ ಮಾಡಿದ ದಲ್ಲಾಳಿಗಳು ರೈತರಿಗೆ ಹಣ ನೀಡದೆ ವಂಚನೆ ಮಾಡಿದ್ದಾರೆ. ಈ ವಿಚಾರವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.
ಜಿಲ್ಲಾಧಿಕಾರಿಗಳನ್ನು ಕಚೇರಿ ಬಿಟ್ಟು ಹೊರ ಬರದಂತೆ ಮಾಡೋಣ ಎಂದು ರೈತರು ಪಟ್ಟು ಹಿಡಿದಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿಯೇ ಅಡುಗೆ ಮಾಡಿ ರಾತ್ರಿ ಊಟವನ್ನೂ ಅಲ್ಲಿಯೇ ಮಾಡಿದ್ದಾರೆ. ಸಾಲ-ಸೋಲ ಮಾಡಿ, ಹವಾಮಾನ ವೈಪರಿತ್ಯದ ನಡುವೆಯೂ ಕೃಷಿಯನ್ನು ಮುಂದುವರೆಸಿಕೊAಡು ಬರುತ್ತಿರುವ ಅನ್ನದಾತರಿಗೆ ಈ ಸ್ಥಿತಿ ಬಂದೊದಗಿರುವುದು ವಿಷಾದನೀಯ. ಧರಣಿ ಹಾಗೂ ಬಾಕಿ ಹಣ ಕೊಡಿಸುವ ವಿಚಾರವಾಗಿ ಜಿಲ್ಲಾಡಳಿತದ ನಡೆಯೇನು ಎಂದು ಕಾದು ನೋಡಬೇಕಿದೆ.
ಈ ಹಿಂದೆ ರೈತರು ತಮ್ಮ ಬಾಕಿ ಹಣವನ್ನು ಕೊಡಿಸುವಂತೆ ಹೋರಾಟ ನಡೆಸಿದಾಗ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಹಣವನ್ನು ಕೊಡಿಸುವುದಾಗಿ ಭರವಸೆ ನೀಡಿತ್ತು. ಈ ಸಂದರ್ಭದಲ್ಲಿ ರೈತರು ಜನವರಿ 5ರವರೆಗೆ ಗಡುವು ನೀಡಿದ್ದರು. ಆದರೆ ಸಮಸ್ಯೆ ಬಗೆಹರಿಯದ ಕಾರಣ ಸೋಮವಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಹೋರಾಟ ಆರಂಭಿಸಿದರು.