ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ದಸರಾ ಹಬ್ಬ ನಮ್ಮೆಲ್ಲ ಹಿಂದೂ ಬಾಂಧವರಿಗೆ ಭಾವೈಕ್ಯತೆಯ ಹಬ್ಬವಾಗಿದ್ದು, ಇದಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಇಂತಹ ಸಂಪ್ರದಾಯಬದ್ಧವಾದ ದಸರಾ ಹಬ್ಬದಲ್ಲಿ `ದುರ್ಗಾದೌಡ’ ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳಿಂದ ಪಟ್ಟಣದ ಜನತೆಯ ಸಹಕಾರದಿಂದ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು, ಇದೀಗ ಮೂರನೇ ವರ್ಷದ ಕಾರ್ಯಕ್ರಮವು ಅಕ್ಟೋಬರ್ 3ರಿಂದ 11ರವರೆಗೆ 9 ದಿನಗಳ ಕಾಲ ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ದಸರಾ ಉತ್ಸವ ಸಮಿತಿಯ ರೂವಾರಿ, ಯುವ ಮುಖಂಡ ಗುರುನಾಥ ದಾನಪ್ಪನವರ ಹೇಳಿದರು.
ಅವರು ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ದಸರಾ ಹಬ್ಬ ನಮ್ಮೆಲ್ಲ ಹಿಂದೂ ಬಾಂಧವರಿಗೆ ಭಾವೈಕ್ಯತೆಯ ಹಬ್ಬವಾಗಿದ್ದು, ಇದಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಇಂತಹ ಸಂಪ್ರದಾಯಬದ್ಧವಾದ ದಸರಾ ಹಬ್ಬದ ದುರ್ಗಾದೌಡ ಕಾರ್ಯಕ್ರಮದ ಮೂಲಕ ಪಟ್ಟಣದಲ್ಲಿ ಆಚರಿಸುತ್ತಿರುವದಕ್ಕೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ವರ್ಷಗಳ ಕಾಲ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ಪ್ರಸ್ತುತ ದಿನಮಾನಗಳಲ್ಲಿ ಯುವಕರಲ್ಲಿ ಧಾರ್ಮಿಕ ಮೌಲ್ಯ ಹೆಚ್ಚಿಸುವದು, ಧರ್ಮ ಜಾಗೃತಿ, ಧಾರ್ಮಿಕ ಕಲ್ಪನೆಗಳು ಉಳಿಯಬೇಕು ಎನ್ನುವ ಉದ್ದೇಶವು ಈ ಕಾರ್ಯಕ್ರಮದ್ದಾಗಿದೆ.
ಎಲ್ಲ ಧರ್ಮದಲ್ಲಿ ಇರುವಂತೆ ನಮ್ಮಲ್ಲಿಯೂ ಧರ್ಮ ಜಾಗೃತಿ ಮೂಡಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಪಟ್ಟಣದಲ್ಲಿ ಎಲ್ಲ ಮುಖಂಡರು ಪ್ರೋತ್ಸಾಹ ಸಹಕಾರವನ್ನು ಈ ಕಾರ್ಯಕ್ರಮಕ್ಕೆ ನೀಡುತ್ತಿದ್ದಾರೆ. ಇಂತಹ ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸುವಂತೆ ಮನವಿ ಮಾಡುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿ ಅಧ್ಯಕ್ಷ ದೇವೆಂದ್ರಪ್ಪ ಗಡೇದ, ಮಲ್ಲನಗೌಡ ಪಾಟೀಲ, ತಿಪ್ಪಣ್ಣ ಸಂಶಿ, ಯಲ್ಲಪ್ಪ ಕೋರದಾಳ, ರಾಜಶೇಖರ ಶಿಗ್ಲಿಮಠ, ರಾಘವೇಂದ್ರ ಪೂಜಾರ, ರವಿ ಲಿಂಗಶೆಟ್ಟಿ, ನಾಗರತ್ನ ನಾಗಲೋಟಿ, ಮಲ್ಲವ್ವ ಜಡಿ, ಚಿನ್ನಮ್ಮ ಮಡಿವಾಳರ ಸೇರಿದಂತೆ ಅನೇಕರು ಹಾಜರಿದ್ದರು.
ಸಮಿತಿಯ ಮುಖಂಡ ಬಸವರಾಜ ಅರಳಿ ಮಾತನಾಡಿ, ಪಟ್ಟಣದ ದಸರಾ ಉತ್ಸವ ಸಮಿತಿ ವತಿಯಿಂದ ದುರ್ಗಾದೌಡ ಕಾರ್ಯಕ್ರಮ ಅಕ್ಟೋಬರ್ 3ರಿಂದ 11ವರೆಗೂ ನಡೆಯಲಿದೆ ಅ.3ರಂದು ಬೆಳಿಗ್ಗೆ 5 ಗಂಟೆಗೆ ಗ್ರಾಮದೇವತೆ ದ್ಯಾಮವ್ವ ದೇವಸ್ಥಾನದಿಂದ ಕರೇವಾಡಿಮಠದ ಮಳೇಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಗುರು-ಹಿರಿಯರಿಂದ ಉತ್ಸವಕ್ಕೆ ಚಾಲನೆ ದೊರೆಯಲಿದೆ. ದುರ್ಗಾದೌಡ ಕಾರ್ಯಕ್ರಮದ ರೂವಾರಿ ಮತ್ತು ಕಳೆದ ಎರಡು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಕ್ರಮ ನೀಡಿದ ಗುರುನಾಥ ದಾನಪ್ಪನವರ ಅವರು ನೇತೃತ್ವ ವಹಿಸಲಿದ್ದಾರೆ ಎಂದು ಹೇಳಿದರು.