ಕರ್ನಾಟಕದಲ್ಲಿ ದಸರಾ ಸಂಭ್ರಮ: ವಿಶ್ವವಿಖ್ಯಾತ ಜಂಬೂ ಸವಾರಿಗೆ ಅದ್ದೂರಿ ಚಾಲನೆ!

0
Spread the love

ಮೈಸೂರು:- ಕರ್ನಾಟಕದಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ.

Advertisement

ನಾಡದೇವತೆ ಚಾಮುಂಡೇಶ್ವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ರಿಂದ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ದೊರೆತಿದ್ದು, ಕೋಟ್ಯಾಂತರ ಭಕ್ತರು ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿಸಲಾದ ನಾಡದೇವಿ ಚಾಮುಂಡೇಶ್ವರಿಯನ್ನು ಕಣ್ತುಂಬಿಕೊಂಡರು.

ಅಭಿಮನ್ಯು ಆನೆ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಹೆಜ್ಜೆ ಹಾಕಿದೆ. 750 ಕೆ.ಜಿ. ತೂಕದ ಚಿನ್ನದಂಬಾರಿ ಹೊತ್ತು ಅರಮನೆ ಆವರಣದಲ್ಲಿ ಅಭಿಮನ್ಯು ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಸರ್ವಾಲಂಕಾರ ಭೂಷಿತಳಾಗಿ ನಾಡ ಅಧಿದೇವತೆ ಚಾಮುಂಡೇಶ್ವರಿ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದನ್ನು ಕಂಡು ಜನರು ಹರ್ಷೋದ್ಘಾರ ವ್ಯಕ್ತಪಡಿಸಿದರು. ‘ಜೈ ಚಾಮುಂಡೇಶ್ವರಿ..’ ಎಂದು ಕೂಗಿ ಭಕ್ತಿ-ಭಾವ ಮೆರೆದರು.

ಸತತ 5ನೇ ಬಾರಿಗೆ ಚಿನ್ನದಂಬಾರಿ ಹೊತ್ತು ಕ್ಯಾಪ್ಟನ್‌ ಅಭಿಮನ್ಯು ಪುಷ್ಪಾರ್ಚನೆ ಸ್ಥಳಕ್ಕೆ ಸುಮಾರು 400 ಮೀ. ಸಾಗಿದ. ಅಭಿಮನ್ಯು ಎಡಬಲದಲ್ಲಿ ಕುಮ್ಕಿ ಆನೆಗಳಾಗಿ ಹಿರಣ್ಯ ಮತ್ತು ಲಕ್ಷ್ಮಿ ಆನೆಗಳು ಹೆಜ್ಜೆ ಹಾಕಿದವು. ಸಂಜೆ 5:02 ಕ್ಕೆ ತಾಯಿ ಚಾಮುಂಡೇಶ್ವರಿ ವಿರಾಜಮಾನಳಾಗಿದ್ದ ಜಂಬೂಸವಾರಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿದರು. ಅರ್ಧ ಗಂಟೆ ತಡವಾಗಿ ಪುಷ್ಪಾರ್ಚನೆ ನೆರವೇರಿಸಲಾಯಿತು. ಅವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ.ಮಹದೇವಪ್ಪ, ಸಚಿವ ಶಿವರಾಜ್‌ ತಂಗಡಗಿ, ಮೈಸೂರು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಸಾಥ್‌ ನೀಡಿದರು. ಪುಷ್ಪಾರ್ಚನೆ ಬಳಿಕ ರಾಷ್ಟ್ರಗೀತೆಗೆ ಎಲ್ಲರೂ ಗೌರವ ಸಲ್ಲಿಸಿದರು.

ಜಂಬೂಸವಾರಿ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಧನಂಜಯ ಸಾಗಿದ್ದಾನೆ. ನೌಫತ್‌ ಆನೆಯಾಗಿ ಗೋಪಿ ಹೆಜ್ಜೆ ಹಾಕಿದ್ದಾನೆ. ಮೆರವಣಿಗೆಯುದ್ಧಕ್ಕೂ ಜಾನಪದ ಕಲಾತಂಡಗಳ ವೈಭವ ಸಾಗಿದೆ. 50ಕ್ಕೂ ಹೆಚ್ಚು ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು.


Spread the love

LEAVE A REPLY

Please enter your comment!
Please enter your name here