ಮೈಸೂರು:- ವಿಶ್ವವಿಖ್ಯಾತ ಮೈಸೂರು ದಸರಾ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು ವಿಜಯದಶಮಿ ಜಂಬೂ ಸವಾರಿಯೊಂದಿಗೆ ನವರಾತ್ರಿ ಹಬ್ಬ ಮುಕ್ತಾಯವಾಗುತ್ತಿದೆ.
ಅದರ ಭಾಗವಾಗಿ ಮೈಸೂರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇಗುಲದ ಬನ್ನಿಮಂಟಪದಲ್ಲಿ ಇಂದು ಮಧ್ಯಾಹ್ನ ಜಂಬೂ ಸವಾರಿಗೆ ಮುನ್ನ ಶಮಿ ಪೂಜೆ ನಡೆಯಿತು. ರಾಜ ಯದುವೀರ್ ಒಡೆಯರ್ ಶಮಿ ಪೂಜೆ ನೆರವೇರಿಸಿದರು.
ವಜ್ರಮುಷ್ಠಿ ಕಾಳಗ ಮುಕ್ತಾಯವಾಗುತ್ತಿದ್ದಂತೆ ಭುವನೇಶ್ವರಿ ದೇವಾಲಯದವರೆಗೆ ವಿಜಯಯಾತ್ರೆ ನಡೆಯಿತು. ಬಳಿಕ ಯದುವೀರ್ ಒಡೆಯರ್, ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು. ಪೂಜೆ ಮುಕ್ತಾಯವಾಗುತ್ತಿದ್ದಂತೆ ಯದುವೀರ್ ಅರಮನೆಗೆ ವಾಪಸ್ ಆದರು. ಇದರೊಂದಿಗೆ ಅರಮನೆ ದಸರಾ ಮುಕ್ತಾಯಗೊಂಡಿದೆ.
ಪೊಲೀಸ್ ಬ್ಯಾಂಡ್ ಜೊತೆಗೆ ಪಟ್ಟದ ಆನೆ, ಕುದುರೆ, ಹಸು ವಿಜಯಯಾತ್ರೆಯಲ್ಲಿ ಭಾಗಿಯಾಗಿದ್ದವು. ಖಾಸಾ ಆಯುಧಗಳನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ಮಾಡಲಾಯಿತು. ಶ್ರೀಕಂಠದತ್ತ ಒಡೆಯರ್ ಬಳಸುತ್ತಿದ್ದ ಕಾರಿನಲ್ಲಿ ಯದುವೀರ್ ವಿಜಯಯಾತ್ರೆಯಲ್ಲಿ ಪಾಲ್ಗೊಂಡಿದ್ದರು.



