ದರ್ಬಾರ್‌ನ ಸಿದ್ಧತೆಗಳು ಭರದಿಂದ ಸಾಗಲಿ : ರಂಭಾಪುರಿ ಜಗದ್ಗುರುಗಳು

0
Dussehra Durbar pre-meeting
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಬರುವ ಅಕ್ಟೋಬರ್ 3ರಿಂದ 12ರವರೆಗೆ ಅಬ್ಬಿಗೆರೆ ಗ್ರಾಮದಲ್ಲಿ ನಡೆಯಲಿರುವ ಶರನ್ನವರಾತ್ರಿ ದಸರಾ ದರ್ಬಾರ್ ಮುಂದೆ ನಡೆಯುವ ಎಲ್ಲ ದರ್ಬಾರ್‌ಗಳಿಗೆ ವಿಶೇಷ ಮಾದರಿಯಾಗಲಿದೆ. ಇಂದಿನ ಈ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ನಮಗೆ ಈ ವಿಶ್ವಾಸ ಮೂಡಿದೆ.

Advertisement

ಶರನ್ನವರಾತ್ರಿ ದಸರಾ ದರ್ಬಾರ್‌ನ ಎಲ್ಲ ಸಿದ್ಧತೆಗಳೂ ಇಂದಿನಿಂದಲೇ ಭರದಿಂದ ನಡೆಯಲಿ ಎಂದು ರಂಭಾಪುರಿ ಜಗದ್ಗುರು ಶ್ರೀ 1008 ಡಾ. ವೀರ ಸೋಮೇಶ್ವರ ಮಹಾಸ್ವಾಮಿಗಳವರು ಹೇಳಿದರು.

ಸಮೀಪದ ಅಬ್ಬಿಗೆರೆ ಹಿರೇಮಠದಲ್ಲಿ ಜರುಗಿದ ದಸರಾ ದರ್ಬಾರ್ ಪೂರ್ವಭಾವಿ ಸಭೆಯ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು.

ಅನ್ನ ದಾಸೋಹದಲ್ಲಿ ಅಬ್ಬಿಗೆರೆ ಗ್ರಾಮ ಯಾವಾಗಲೂ ಮುಂದು. ಇದು ಲಿಂ. ಸೋಮಶೇಖರ ಶಿವಾಚಾರ್ಯರ ಕಾಲದಿಂದಲೂ ಪ್ರಸಿದ್ಧಿಯಾದ ಸಂಗತಿ. ಸಮಾಜಕ್ಕೆ ಲಿಂ. ಸೋಮಶೇಖರ ಶಿವಾಚಾರ್ಯರ ಕೊಡುಗೆ ಅಪಾರ.

ಭಕ್ತ ವತ್ಸಲರಾಗಿದ್ದ ಅವರು ಎಂದಿಗೂ ಭಕ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರು. ಅವರ ಬಹಳ ದಿನಗಳ ಕನಸು ಬರುವ ಅಕ್ಟೋಬರ್ 3ರಿಂದ ಅಬ್ಬಿಗೆರೆಯಲ್ಲಿ ಸಾಕಾರಗೊಳ್ಳಲಿದೆ. ಅವರ ಸತ್ಯ ಸಂಕಲ್ಪದಂತೆ ಈ ಕಾರ್ಯ ಜರುಗಲಿದ್ದು, ಇದಕ್ಕೆ ರೋಣ ಶಾಸಕ ಜಿ.ಎಸ್. ಪಾಟೀಲರು ಪ್ರೇರಕ ಶಕ್ತಿಯಾಗಿದ್ದಾರೆ ಎಂದರು.

ಸ್ವಾಗತ ಸಮಿತಿಯ ಅಧ್ಯಕ್ಷ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಇದು ಕೇವಲ ಅಬ್ಬಿಗೆರೆಯ ಉತ್ಸವವಾಗದೆ ಜಿಲ್ಲಾ ಉತ್ಸವದಂತೆ ರಾಜ್ಯ ಮಟ್ಟಕ್ಕೆ ಸರಿಸಮನಾದ ಉತ್ಸವವಾಗಬೇಕು. ಅದಕ್ಕಾಗಿ ಎಲ್ಲರೂ ಕಾಯಾ, ವಾಚಾ, ಮನಸ್ಸಿನಿಂದ ದುಡಿದಾಗ ಈ ಉತ್ಸವಕ್ಕೊಂದು ಅರ್ಥ ಬರುತ್ತದೆ. ಉತ್ಸವದ ಯಶಸ್ಸಿಗೆ ಏನೇ ಅನುಕೂಲ ಬೇಕಾದರೂ ಮಾಡಿಕೊಡಲು ನಾನು ಸಿದ್ಧನಿದ್ದೇನೆ. ಎಲ್ಲರೂ ಒಂದಾಗಿ, ಒಮ್ಮನದಿಂದ ಈ ದಸರಾ ದರ್ಬಾರ್ ಕಾರ್ಯಕ್ರಮವನ್ನು ನ ಭೂತೋ ನ ಭವಿಷ್ಯತಿ ಎನ್ನುವಂತೆ ಯಶಸ್ವಿ ಮಾಡೋಣ ಎಂದರು.

ಸಿದ್ದರ ಬೆಟ್ಟದ ಶ್ರೀಗಳು, ಶರನ್ನವರಾತ್ರಿ ಉತ್ಸವದ ಅಧ್ವರ್ಯುಗಳಾದ ಷ.ಬ್ರ. ಶ್ರೀ ವೀರಭದ್ರ ಶಿವಾಚಾರ್ಯ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶ್ರೀಮಠದ ಹಿಂದಿನ ಶ್ರೀಗಳವರ ಕನಸು ಕೈಗೂಡುವ ಕಾಲ ಈಗ ಬಂದಿದೆ. ಅವರ ಕನಸನ್ನು ನನಸು ಮಾಡಲು ಅಬ್ಬಿಗೆರೆಯ ಪ್ರತಿಯೊಬ್ಬರೂ ಸ್ಪಂದಿಸುತ್ತಿರುವುದು ವಿಶೇಷ ಉತ್ಸಾಹವನ್ನು ಮೂಡಿಸಿದೆ. 2005ರಲ್ಲಿ ಶ್ರೀಶೈಲ ಜಗದ್ಗುರುಗಳ ಶರನ್ನವರಾತ್ರಿ ಉತ್ಸವವನ್ನು ಆಚರಿಸಿದ ಅನುಭವ ಅಬ್ಬಿಗೆರೆ ಗ್ರಾಮದ ಮಹಾ ಜನತೆಗಿದೆ. ಆದ್ದರಿಂದ ಈ ಉತ್ಸವವೂ ಸಹ ಯಾವ ಅಡತಡೆಯಿಲ್ಲದೆ ಸಾಂಗವಾಗಿ ಸಂಭ್ರಮದಿಂದ ಎಲ್ಲ ಭಕ್ತರ ಸಹಕಾರದಿಂದ ಜರುಗಲಿದೆ ಎಂದರು.

ಸಭೆಯನ್ನುದ್ದೇಶಿಸಿ ಸೂಡಿಯ ಷ.ಬ್ರ. ಶ್ರೀ ಕೊಟ್ಟೂರು ಶಿವಾಚಾರ್ಯರು, ಮುಕ್ತಿ ಮಂದಿರದ ಷ.ಬ್ರ. ಶ್ರೀ ವಿಮಲರೇಣುಕ ಮುಕ್ತಿ ಮುನಿಗಳು ಇನ್ನೂ ಅನೇಕ ಹರ-ಗುರು-ಚರ ಮೂರ್ತಿಗಳು ಮಾತನಾಡಿದರು. ವೇದಿಕೆಯ ಮೇಲೆ ಹಂಪಸಾಗರ ಶ್ರೀಗಳು, ನರೇಗಲ್ಲ ಹಿರೇಮಠದ ಶ್ರೀಗಳು, ಸಂಗೊಳ್ಳಿಯ ಶ್ರೀಗಳು, ಅಬ್ಬಿಗೆರೆಯ ಯಲ್ಲಾಲಿಂಗೇಶ್ವರರು ಇನ್ನೂ ಮುಂತಾದ ಶ್ರೀಗಳವರು, ಧುರೀಣರಾದ ಆಯ್.ಎಸ್. ಪಾಟೀಲ, ವೀರೇಶ ಕೂಗು, ಚಂದ್ರು ಬಾಳಿಹಳ್ಳಿಮಠ, ಡಾ. ಆರ್.ಬಿ. ಬಸವರಡ್ಡೇರ, ಡಾ. ಆರ್.ಕೆ. ಗಚ್ಚಿನಮಠ, ಸಂಗಯ್ಯ ರಾಟಿಮನಿ ಇನ್ನೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯಾದ್ಯಂತ ಅನೇಕ ಗ್ರಾಮಗಳ ಗಣ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಶ್ರೀಪೀಠದ ಗಂಗಾಧರ ಶಾಸ್ತಿçಗಳು ಪ್ರಾರ್ಥಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಗುಗ್ಗರಿ ಸ್ವಾಗತಿಸಿದರು. ಬಸವರಾಜ ವೀರಾಪೂರ ನಿರೂಪಿಸಿ, ವಂದಿಸಿದರು.

ಭೂಮಿ ಪೂಜೆ

ಪೂರ್ವಭಾವಿ ಸಭೆಯ ನಂತರ ದಸರಾ ದರ್ಬಾರ್ ನಡೆಯಲಿರುವ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕುವ ಸ್ಥಳದಲ್ಲಿ ಜಗದ್ಗುರುಗಳು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರುಗಳು, ಈ ಸ್ಥಳ ತುಂಬಾ ಪ್ರಶಸ್ತವಾಗಿದ್ದು, ವಿಶಾಲವಾಗಿದೆ. ಇಂತಹ ಉತ್ತಮ ಸ್ಥಳವನ್ನು ಆಯ್ಕೆ ಮಾಡಿರುವ ಸ್ವಾಗತ ಸಮಿತಿಯವರನ್ನು ತಾವು ಆಶೀರ್ವದಿಸುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಎಲ್ಲ ಶ್ರೀಗಳು, ಸ್ವಾಗತ ಸಮಿತಿಯ ಅಧ್ಯಕ್ಷ ಜಿ.ಎಸ್. ಪಾಟೀಲ ಸೇರಿದಂತೆ ಅನೇಕ ಗಣ್ಯಮಾನ್ಯರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here