ಬೆಂಗಳೂರು: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ತಿದ್ದುಪಡಿ ವಿಧೇಯಕ ಇಂದು ವಿಧಾನ ಪರಿಷತ್ ನಲ್ಲಿ ಅಂಗೀಕಾರ ಆಗಿದೆ. ತಿದ್ದುಪಡಿ ವಿಧೇಯಕ ಮಂಡಿಸಿ ಮಾತನಾಡಿದ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ನಗರ ಪ್ರದೇಶಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ನರ್ಸ್ಗಳು, ಡಿ ಗ್ರೂಪ್ ಸಿಬ್ಬಂದಿಗಳು ದೀರ್ಘಕಾಲದವರೆಗೂ ಒಂದೇ ಕಡೆ ಕೆಲಸ ಮಾಡುತ್ತಿದ್ದಾರೆ.
ಪಾರದರ್ಶಕತೆ ತರುವ ಸಲುವಾಗಿ ಇವರನ್ನ ವರ್ಗಾವಣೆ ಮಾಡಿದರೆ ನ್ಯಾಯಾಲಯದ ಮೊರೆ ಹೋಗಿ ವರ್ಗಾವಣೆಗೆ ತಡೆಯಾಜ್ಞೆ ತರುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಇತರೆ ಸಿಬ್ಬಂದಿಗಳ ಕೊರತೆ ಉಂಟಾಗುತಿತ್ತು.
ಇದನ್ನ ಸರಿದೂಗಿಸಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದರು. ಹಲವು ವರ್ಷಗಳ ಕಾಲ ಒಂದೇ ಕಡೆ ಕೆಲಸ ಮಾಡುತ್ತಿರುವ ವೈದ್ಯರಿಗೆ ಅಥವಾ ಬಡ್ತಿ ಸಂದರ್ಭದಲ್ಲಿ ಕಡ್ಡಾಯವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಬೇಕಿದೆ. ಈಗಾಗಲೇ 500 ವೈದ್ಯರು ಹಾಗೂ ಇನ್ನಿತರರನ್ನ ಕೌನ್ಸಿಲಿಂಗ್ ವರ್ಗಾವಣೆ ಮಾಡಲಾಗಿದೆ ಎಂದರು.



