ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: : ಪ್ರತಿಯೊಂದು ಊರಿನಲ್ಲಿಯೂ ಗ್ರಾಮದೇವತೆಯಾಗಿ ದ್ಯಾಮವ್ವದೇವಿ ದೇವಸ್ಥಾನಗಳನ್ನು ಕಾಣಬಹುದು. ಗ್ರಾಮದೇವತೆ ಆಯಾ ಊರಿನ ಅಧಿದೇವತೆಯಾಗಿರುತ್ತಾಳೆ. ದೇವಿಯು ಗ್ರಾಮವನ್ನು ಕಾಯುವದರ ಜೊತೆಗೆ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ನಂಬಿಕೆ ಬಹುತೇಕ ಗ್ರಾಮಗಳಲ್ಲಿ ಇದೆ. ಇಂತಹ ಇಷ್ಟಾರ್ಥಗಳನ್ನು ಈಡೇರಿಸುವ ಹಾಗೂ ನೂರಾರು ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಪಟ್ಟಣದಿಂದ ಶಿಗ್ಲಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ನೆಲೆನಿಂತಿರುವ ಕನಕಾಪುರ ದ್ಯಾಮವ್ವ ದೇವಿಯ ಇತಿಹಾಸವೇ ವಿಶಿಷ್ಟವಾಗಿದೆ.
ಕನಕಾಪುರ ಹೆಸರಿಗೆ ತಕ್ಕ ಹಾಗೆ ಧನ-ಕನಗಳಿಗೆ ಪ್ರಸಿದ್ಧವಾದ ಊರಾಗಿತ್ತು. ಗ್ರಾಮದ ಹೆಸರೇ ಹೇಳುವಂತೆ ಬಂಗಾರ, ಮುತ್ತು-ರತ್ನಗಳ ವ್ಯಾಪಾರವು ಭರಾಟೆಯಿಂದ ನಡೆಯುತ್ತಿದ್ದ ಕ್ಷೇತ್ರವಾಗಿತ್ತು. 30 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ಊರು ವ್ಯಾಪಿಸಿತ್ತು. ಸುತ್ತಲೂ ಸುಂದರವಾದ ದೇವಾಲಯಗಳು ಎತ್ತರವಾದ ಮುಡೆ, ಬಾವಿಗಳು ಇದ್ದವು. ಸ್ವಾತಂತ್ರ ಪೂರ್ವದಲ್ಲಿ ಈ ಭಾಗ ಸಂಸ್ಥಾನಿಕರ ಆಡಳಿತಕ್ಕೆ ಒಳಪಟ್ಟಿದ್ದವು. ಹಳ್ಳಿ ನೇರ ಬ್ರಿಟಿಷರ ಆಡಳಿತದಲ್ಲಿತ್ತು. 1850ರಿಂದ 1900ರ ಮಧ್ಯಕಾಲದಲ್ಲಿ ಕನಕಾಪುರ ಗ್ರಾಮಕ್ಕೆ ಸಾಂಕ್ರಾಮಿಕ ರೋಗಗಳು ಮತ್ತು ಕಳ್ಳಕಾಕರ ಪೀಡೆ ಕಾಡತೊಡಗಿತು. ಇವೆರಡು ಕಾರಣಗಳಿಂದ ಊರು ಸಂಪೂರ್ಣ ಬರಿದಾಯಿತು. ಇದೇ ಕಾಲಾವಧಿಯಲ್ಲಿ ಸಮೀಪ ಇದ್ದ ಇನ್ನೂ ಎರಡು ಹಳ್ಳಿಗಳಾದ ಕಾನಕೊಪ್ಪ ಮತ್ತು ಉಪನಾಳ ಹಳ್ಳಿಗಳು ಸಹ ಖಾಲಿಯಾದವು.
ಕನಕಾಪೂರ ಅಷ್ಟ್ರೈಶ್ವರ್ಯ ತುಂಬಿಕೊಂಡಿದ್ದ ನಾಡಾಗಿತ್ತು. ಕಾಲಾಂತರಗಳಲ್ಲಿ ಇಲ್ಲಿ ಯಾರೂ ನೆಲೆ ನಿಲ್ಲದೆ ಇರುವದರಿಂದ ಈ ಗ್ರಾಮ ಸಂಪೂರ್ಣ ಹಾಳಾಗಿತ್ತು. ಇದು ಇನ್ನೂ ಕಂದಾಯ ಗ್ರಾಮಗಳಾಗದೆ ದಾಖಲೆಗಳಲ್ಲಿ ಉಳಿದಿವೆ. ಇದಕ್ಕೆ ಕಾಲಾವಧಿಯಲ್ಲಿ ಕುರುಹುಗಳಿವೆ. ದೇವಸ್ಥಾನ, ಬಂಗಾರ, ಮುತ್ತು-ರತ್ನಗಳನ್ನು ಮಾರುತ್ತಿದ್ದ ಗ್ರಾಮ ಹಾಳು ಸುರಿಯುವಚಿತಾಯಿತು. ಇದಕ್ಕೆ ಹಿನ್ನೆಲೆಯಾಗಿ ಹಲವಾರು ಕಥೆಗಳು ಕೇಳಿ ಬರುತ್ತವೆ. ಹೀಗೆ ಗ್ರಾಮ ನಾಶವಾದರೂ ಸಹ ಈ ದ್ಯಾಮವ್ವ ದೇವಿ ಅಲ್ಲಿಯೇ ನೆಲೆನಿಂತಿರುವದು ವಿಶಿಷ್ಟ ಎನ್ನಬಹುದು.
ದ್ಯಾಮವ್ವದೇವಿಗೆ ಶಿಗ್ಲಿ, ಲಕ್ಷೇಶ್ವರ, ಮಲ್ಲಾಪುರ ಸೇರಿದಂತೆ ದೂರದ ಊರುಗಳಲ್ಲಿಯೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿದ್ದು, ಮಹಾನವಮಿ, ದೀಪಾವಳಿ, ಯುಗಾದಿ, ಪಟ್ಟಗಳಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ದೇವಸ್ಥಾನವು ಹಂತ ಹಂತವಾಗಿ ಜೀರ್ಣೋದ್ಧಾರಗೊಳ್ಳುತ್ತಾ ಬಂದಿದೆ. ಈ ಮೂರು ಊರುಗಳ ಜನರು ಪಕ್ಕದ ಊರುಗಳಿಗೆ ವಲಸೆ ಹೋಗಿದ್ದರೆ, ತಮ್ಮ ಹಿರಿಯರ ನೆಲೆಗಳೊಂದಿಗೆ ಇಂದಿನ ಪೀಳಿಗೆಯವರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಅಲ್ಲಿ ಶ್ರೀದೇವಿಯ ದೇವಾಲಯಯಕ್ಕೆ ಪೂಜೆ ಸಲ್ಲಿಸಲು ಬರುತ್ತಾರ. ಭಕ್ತರೆಲ್ಲರ ಇಚ್ಚಾಶಕ್ತಿಯಿಂದ ಅಂದಾಜು 2 ಕೋಟಿ 25 ಲಕ್ಷ ರೂ ವೆಚ್ಚದಲ್ಲಿ ಸುಂದರ ಕಲ್ಲಿನ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಭಕ್ತರು ತನು-ಮನ-ಧನದ ಸಹಾಯ-ಸಹಕಾರ ನೀಡಬೇಕು ಎಂದು ದೇವಸ್ಥಾನ ಕಮಿಟಿ ಕಾರ್ಯದರ್ಶಿ ಅಶೋಕ ಶಿರಹಟ್ಟಿ ತಿಳಿಸಿದ್ದಾರೆ.
ಇಂತಹ ಶಕ್ತಿ ದೇವತೆ ಕನಕಾಪೂರ ದ್ಯಾಮವ್ವ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಲವಾರು ಕಾರಣಗಳಿಂದ ನಿಂತು ಹೋಗಿತ್ತು. ಕಳೆದ 5 ವರ್ಷಗಳಿಂದ ಭಕ್ತರ ಅಭೀಷ್ಟೆಯ ಮೇರೆಗೆ ಜಾತ್ರೆ ಪ್ರಾರಂಭವಾಗಿದ್ದು, ಫೆ. 8ರಂದು 6ನೇ ವರ್ಷದ ಜಾತ್ರಾ ಮಹೋತ್ಸವ, ಫೆ.9ರಂದು ಕಡುಬಿನ ಕಾಳಗ ನೆರವೇರಲಿದೆ.